Advertisement

ಮುಂಗಾರು ಎದುರಿಸಲು ಅರಣ್ಯ ಇಲಾಖೆ ಸಜ್ಜು: ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ

12:12 AM May 25, 2024 | Team Udayavani |

ಮಂಗಳೂರು: ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳು, ಅಂಗನವಾಡಿ, ಮೆಸ್ಕಾಂ, ಲೋಕೋಪಯೋಗಿ ಇಲಾಖೆ ಅಪಾಯಕಾರಿ ಮರಗಳ ಪಟ್ಟಿಮಾಡಿ ನೀಡಿದ್ದು, ಸುಮಾರು 2 ಸಾವಿರ ಅಪಾಯಕಾರಿ ಮರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ತೀರಾ ಅಗತ್ಯ ಎನ್ನುವ ಮರಗಳ ತೆರವಿಗೆ ಆದ್ಯತೆ ನೀರುವುದರೊಂದಿಗೆ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಅರಣ್ಯ ಇಲಾಖೆ ವತಿಯಿಂದ ನಡೆಯಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಮುಂಗಾರು ಎದುರಿಸಲು ಇಲಾಖೆ ಸಜ್ಜಾಗಿದೆ. ಈ ಬಾರಿ ತಾಲೂಕಿಗೆ ಒಬ್ಬರಂತೆ ಸಿಬಂದಿಯನ್ನು ತಾಲೂಕು ಮಟ್ಟದ ವಿಕೋಪ ನಿರ್ವಹಣ ಕಚೇರಿಯಲ್ಲಿ ನಿಯೋಜಿಸಲಾಗುವುದು. ಇದರಿಂದ ಮರ ಧರೆಗೆ ಉರುಳುವುದು, ಕೊಂಬೆಗಳು ಮುರಿದು ಬೀಳುವುದು ಸೇರಿದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಶೀಘ್ರವಾಗಿ ಸಂಬಂಧಪಟ್ಟವರಿಗೆ ರವಾನಿಸಲು ನೆರವಾಗಲಿದೆ ಎಂದರು.

ಆನೆ ದಾಳಿ ತಡೆಗೆ ಕ್ರಮ
ಆನೆಗಳು ಊರಿಗೆ ಬರದಂತೆ ತಡೆಯುವ ನಿಟ್ಟಿನಲ್ಲಿ ಸೋಲಾರ್‌ ಬೇಲಿ, ಆನೆ ಕಂದಕ ನಿರ್ಮಾಣ ಮೊದಲಾದ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ರಸ್ತೆ ಮೊದಲಾದ ಕಾಮಗಾರಿಯ ಸಂದರ್ಭದಲ್ಲಿ ಆನೆಗಳ ಪಥ ಬದಲಾದರೆ ಅವು ಗೊಂದಲಕ್ಕೆ ಒಳಗಾಗಿ ಹೊಸ ದಾರಿ ಹುಡುಕುತ್ತವೆ. ಇದರಿಂದ ಸಾಕಷ್ಟು ಬಾರಿ ಅವುಗಳು ನಾಡಿಗೆ ನುಗ್ಗಿದ ಉದಾಹರಣೆಗಳಿವೆ. 2023-24ರಲ್ಲಿ ಆನೆ ದಾಳಿಯಿಂದ ನಾಲ್ಕು ಜೀವ ಹಾನಿಯಾಗಿದೆ. 2024-25ರಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಕಾಡು ಪ್ರಾಣಿಗಳಿಂದ ಬೆಳೆ ಹಾನಿಗೆ ಕಳೆದ ಸಾಲಿನಲ್ಲಿ 1.4 ಕೋ.ರೂ. ಪರಿಹಾರ ನೀಡಲಾಗಿದೆ ಎಂದರು.

5 ಲಕ್ಷ ಗಿಡ ನಾಟಿ
2024-25ನೇ ಸಾಲಿನಲ್ಲಿ 5 ಲಕ್ಷ ಗಿಡಗಳನ್ನು ನೆಡಲಾಗುವುದು. ಇದರಲ್ಲಿ ಈ ಸಾಲಿನಲ್ಲಿ ರೈತರಿಗೆ 1.63 ಲಕ್ಷ ಗಿಡಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. 3 ರೂ. ಮತ್ತು 7 ರೂ. ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ. ಜನ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಒತ್ತು ನೀಡುತ್ತಿದೆ ಎಂದರು.

Advertisement

1.70 ಲಕ್ಷ ಮರ ತೆರವು
ವಿವಿಧ ಅಭಿವೃದ್ಧಿ ಯೋಜನೆಗಳ ಸಂದರ್ಭದಲ್ಲಿ ಪ್ರತಿ ವರ್ಷ ಸಾಕಷ್ಟು ಮರಗಳ ನಾಶವಾಗುತ್ತದೆ. ಕಳೆದ ವರ್ಷ ಈ ರೀತಿ 1.70 ಲಕ್ಷ ಮರಗಳನ್ನು ತೆರವುಗೊಳಿಸ ಬೇಕಾಯಿತು. ಆದರೂ ಶೇ.33ರಷ್ಟು ಅರಣ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾ ಕಾರಿ ಶ್ರೀಧರ್‌, ಅಕ್ಷಯ್‌ ಪ್ರಕಾಶ್ಕರ್‌, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ ಉಪಸ್ಥಿತರಿದ್ದರು.

ಕೆಪಿಟಿ-ನಂತೂರು ಕಾಮಗಾರಿ
ವಿಳಂಬಕ್ಕೆ ಅರಣ್ಯ ಇಲಾಖೆ ಕಾರಣವಲ್ಲ
ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಮತ್ತು ನಂತೂರು ಜಂಕ್ಷನ್‌ ಫ್ಲೆ$çಓವರ್‌ ಕಾಮಗಾರಿ ವಿಳಂಬವಾಗಿರುವುದರಲ್ಲಿ ಅರಣ್ಯ ಇಲಾಖೆಯ ಯಾವುದೇ ಪಾತ್ರವಿಲ್ಲ. 8 ತಿಂಗಳ ಹಿಂದೆಯೇ ಸಾರ್ವಜನಿಕರು, ಪರಿಸರವಾದಿಗಳಿಂದ ಅಹವಾಲು ಸ್ವೀಕರಿಸಿ ಕೆಪಿಟಿಯಿಂದ ಪದವು ವರೆಗೆ ಮರಗಳನ್ನು ತೆರವುಗೊಳಿಸಲಾಗಿದೆ. ಹೆದ್ದಾರಿ ಪ್ರಾಧಿಕಾರ ಕಡೆಯಿಂದ ಯಾವುದೋ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next