Advertisement

ನಗರ ಹಸುರೀಕರಣಕ್ಕೆ ಮುಂದಾದ ಅರಣ್ಯ ಇಲಾಖೆ

11:51 PM Jul 13, 2019 | sudhir |

ತೆಕ್ಕಟ್ಟೆ: ಅಭಿವೃದ್ಧಿಯ ನಾಗಾಲೋಟದ ನಡುವೆ, ಪರಿಸರ ಮಾಲಿನ್ಯ ಹೆಚ್ಚಾಗುವುದರೊಂದಿಗೆ ಹಸುರು ಮಾಯವಾಗುತ್ತಿದ್ದು, ಭವಿಷ್ಯದ ದಿನಗಳನ್ನು ಸುಸ್ಥಿರವಾಗಿಡುವತ್ತ ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆ ನಗರ ಹಸುರೀಕರಣ ಯೋಜನೆ ( ಗ್ರೀನಿಂಗ್‌ ಅರ್ಬನ್‌ ಏರಿಯಾ ಪ್ರಾಜೆಕ್ಟ್) ಯನ್ನು ಕಾರ್ಯರೂಪಕ್ಕೆ ತರುತ್ತಿದ್ದು ರಾ.ಹೆ. 66ರ ಬದಿ ಹಾಗೂ ಗ್ರಾಮೀಣ ಭಾಗಗಳಲ್ಲಿ 2ಲಕ್ಷಕ್ಕೂ ಅಧಿಕ ಗಿಡವನ್ನು ನೆಟ್ಟಿದೆ.

Advertisement

2 ಲಕ್ಷದ 36 ಸಾವಿರ ಗಿಡ ನಾಟಿ ಉದ್ದೇಶ
ಕುಂದಾಪುರ ತಾಲೂಕಿನ ನೇರಳಕಟ್ಟೆ ಮಾವಿನಗುಳಿ ಸಸ್ಯ ಕೇಂದ್ರದಲ್ಲಿರುವ ಹಲಸು, ಮಾವು, ನೇರಳೆ, ದೂಪಾ, ಮಹಾಘನಿ, ಹೊನ್ನೆ, ಹೆಬ್ಬಲಸು,ಬಾದಾಮಿ, ಬೇವು, ಬಿಲ್ವಪತ್ರೆ, ಸಾಗುವಾನಿ, ಕೃಷ್ಣ ಫಲ, ಕದಿರೆ ಗಿಡ, ಅರಳಿ, ಬೆತ್ತ, ಹೊಳೆ ದಾಸವಾಳ ಸೇರಿದಂತೆ ವಿವಿಧ ಜಾತಿಯ 2 ಲಕ್ಷ ಗಿಡಗಳನ್ನು ಬೈಂದೂರು-ಕುಂದಾಪುರ ತಾಲೂಕಿನ ವರೆಗೆ ನೆಡಲು ಯೋಜನೆ ಹಾಕಿಕೊಳ್ಳಲಾಗಿದೆ. ಜತೆಗೆ ಸಾರ್ವಜನಿಕರಿಗೆ ಸುಮಾರು 36 ಸಾವಿರ ಗಿಡ ವಿತರಿಸಲಾಗಿದೆ.

ಎಲ್ಲೆಲ್ಲಿ ನೆಡಲಾಗಿದೆ?
ಈಗಾಗಲೇ ಕೆದೂರು (ರೈಲ್ವೇ ಟ್ರಾಕ್‌ ಬಳಿ) 4 ಸಾವಿರ ಗಿಡಗಳು, ಕಾಳಾವರ ವಾರಾಹಿ ಕಾಲುವೆ ಬಳಿ 1,900 ಗಿಡಗಳು, ವಕ್ವಾಡಿ -ಕೊರ್ಗಿ ಭಾಗದಲ್ಲಿ ಸುಮಾರು 4 ಸಾವಿರ ಬಿದಿರು ಗಿಡಗಳು ಹಾಗೂ ಕೋಟೇಶ್ವರದಿಂದ ಮಣೂರು ಬಾಳೆಬೆಟ್ಟು ವ್ಯಾಪ್ತಿಯ ಸುಮಾರು 6 ಕಿ.ಮೀ. ಹೆದ್ದಾರಿಯ ಬದಿಯಲ್ಲಿ 1,800 ಅರಣ್ಯ ಗಿಡಗಳಾದ ಹಲಸು, ಹೊನ್ನೆ, ಬಾದಾಮಿ, ಮಹಾಘನಿಯನ್ನು ಏಳು ಮೀಟರ್‌ ಅಂತರದಲ್ಲಿ ನೆಡಲಾಗಿದೆ. ಅವುಗಳಿಗೆ ಬಿದಿರಿನ ಪಟ್ಟಿ ಹಾಗೂ ಮೆಷ್‌ ಅಳವಡಿಸುವ ಕಾರ್ಯವೂ ಪೂರ್ಣಗೊಂಡಿದೆ.

ಗಿಡಗಳ ನಿರ್ವಹಣೆ ಇಲಾಖೆ ಜವಾಬ್ದಾರಿ
ಪರಿಸರ ನಮ್ಮದು. ಪ್ರತಿ ಮನೆ ಮನಗಳಲ್ಲಿ ನಿಸರ್ಗದ ಬಗೆಗೆ ಜಾಗೃತಿ ಮೂಡಬೇಕು. ಈಗಾಗಲೇ ಕೆದೂರು (ರೈಲ್ವೇ ಟ್ರಾಕ್‌ ಬಳಿ), ಕೋಟೇಶ್ವರ, ವಕ್ವಾಡಿ, ಕಾಳಾವರ ಭಾಗಗಳಲ್ಲಿ 12 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ. ಮೂರು ವರ್ಷಗಳ ಕಾಲ ಅದರ ನಿರ್ವಹಣೆ ಜವಾಬ್ದಾರಿಯನ್ನು ಇಲಾಖೆಯೇ ವಹಿಸಿಕೊಳ್ಳಲಿದೆ.
– ಪ್ರಭಾಕರ ಕುಲಾಲ್‌, ವಲಯ ಅರಣ್ಯಾಧಿಕಾರಿಗಳು, ಕುಂದಾಪುರ

– ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next