ಬೆಂಗಳೂರು: ಹಾಯ್ ಬೆಂಗಳೂರು ವಾರ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪಿನ ಪ್ರಕರಣ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದೆ.
ಕಗ್ಗಲೀಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ವರುಣ್ ಕುಮಾರ್ ಸಿಸಿಬಿ ಅಧಿಕಾರಿಗಳು ನೀಡಿರುವ ದಾಖಲೆಗಳನ್ನು ಪರಿಶೀಲಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಲಂ 9,39, 43, 44,48,49ಎ(ಬಿ) ಮತ್ತು 50 ಹಾಗೂ 51ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಂತರ ಪದ್ಮನಾಭನಗರದಲ್ಲಿರುವ ಮನೆ ಮತ್ತು ಕಚೇರಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಿಂಕೆಯನ್ನು ಬೇಟೆಯಾಡಿರುವ ಸಾಧ್ಯತೆ ಕಂಡು ಬಂದಿದ್ದು, ಜಿಂಕೆ ಚರ್ಮದ ಮೇಲಿನ ಬುಲೆಟ್ ಗುರುತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಾಕ್ಷ್ಯ ಸಂಗ್ರಹಕ್ಕಾಗಿ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಿಸಿಬಿ ಪೊಲೀಸರು ರವಿ ಬೆಳಗೆರೆ ಕಚೇರಿ ಮೇಲೆ ದಾಳಿ ನಡೆಸಿ 41/39 ಸೆಂ.ಮೀ. ಅಳತೆಯ ಜಿಂಕೆ ಚರ್ಮ ಮತ್ತು 1.5 ಅಡಿ ಉದ್ದದ ಆಮೆ ಚಿಪ್ಪು ಪತ್ತೆಯಾಗಿತ್ತು. ಇವುಗಳನ್ನು ಜಪ್ತಿ ಮಾಡಿದ್ದ ಸಿಸಿಬಿ ಪೊಲೀಸರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು.
ಜಾಮೀನು ನೀಡದಂತೆ ಸುನಿಲ್ ಮನವಿ: ಈ ಮಧ್ಯೆ ರವಿ ಬೆಳಗೆರೆಗೆ ಮಧ್ಯಂತರ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರವಿ ಬೆಳಗೆರೆ ಪರ ವಕೀಲರು ನೀಡಿರುವ ಅನಾರೋಗ್ಯಕ್ಕೆ ಸಂಬಂಧಪಟ್ಟ ದಾಖಲೆಗಳು ಹಲವು ವರ್ಷಗಳ ಹಿಂದಿನವು. ಕಳೆದ ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಅವರ ಆರೋಗ್ಯ ಸ್ಥಿರವಾಗಿದೆ ಜೈಲಲ್ಲೇ ಇರಬಹುದು ಎಂದು ತಿಳಿಸಿದ್ದರು.
ಇದಾದ ಬಳಿಕ ಬುಧವಾರ ಜಯದೇವ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖೀಸಿದ್ದಾರೆ. ರವಿಬೆಳಗೆರೆಗೆ ಐಸಿಯುನಲ್ಲಿ ಚಿಕಿತ್ಸೆ: ಹೃದಯ ಸಂಬಂಧಿ ಕಾಯಿಲೆ ಬಗ್ಗೆ ಕಳೆದ ಮೂರು ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಬೆಳಗೆರೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.