ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷ ನಿರಂತರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಕಾಯ್ದೆಯನ್ನು ರೈತಸ್ನೇಹಿಯನ್ನಾಗಿಸುವಂತೆ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಕಾಯ್ದೆ ಸರಳವಾದರೆ ರೈತರು ತಮ್ಮ ಭೂಮಿಯಲ್ಲಿ ಬೆಳೆದ ಮರಗಳನ್ನು ಯಾರ ಅಪ್ಪಣೆಯೂ ಇಲ್ಲದೇ ಕಡಿಯಬಹುದು.
ಕರ್ನಾಟಕ ಪ್ರಿಸರ್ವೇಷನ್ ಆಫ್ ಟ್ರೀ ಆ್ಯಕ್ಟ್ 1976 ಪ್ರಕಾರ ಯಾವುದೇ ಮರ ಕಡಿಯಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಇಲ್ಲದೇ ಕಡಿದರೆ ದಂಡದ ಜತೆಗೆ ಮರ ಕಡಿದ ವರಿಗೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಕಳೆದ ತಿಂಗಳು ಅರಣ್ಯ ಸಚಿವ ಉಮೇಶ್ ಕತ್ತಿ ದಿಲ್ಲಿಗೆ ಭೇಟಿ ನೀಡಿದ ಸಂದರ್ಭ ಅಗ್ರಿ ಫಾರೆಸ್ಟ್ ಹೆಚ್ಚಳ ಕುರಿತಂತೆ ಚರ್ಚೆ ನಡೆದಿದ್ದು, 1976 ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಸೂಚನೆ ನೀಡಿದೆ.
ರೈತರು ತಮ್ಮ ಜಮೀನಿನ ಮರವನ್ನೇ ಕಡಿದಿ ರುವ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಇರುವುದು ಸೂಕ್ತ ಎಂಬ ಅಭಿಪ್ರಾಯ ಇಲಾಖೆಯದ್ದು.
ಇಂದು ಅರಣ್ಯ ಸಚಿವರ ಸಭೆ :
ರಾಜ್ಯದ ಅರಣ್ಯ ಇಲಾಖೆಯ ಚಟುವಟಿಕೆಗಳ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲು ಅರಣ್ಯ ಸಚಿವ ಉಮೇಶ್ ಕತ್ತಿ ಗುರುವಾರ ಸಭೆ ನಡೆಸಲಿದ್ದಾರೆ. 1976ರ ಕಾಯ್ದೆಗೆ ತಿದ್ದುಪಡಿ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.