ಹೊಸದಿಲ್ಲಿ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್‌ನಿಂದ ವಿದೇಶಿ ಪ್ರಯಾಣಿಕರಿಗೆ ಹೇರಲಾಗಿದ್ದ ನಿರ್ಬಂಧವನ್ನು ಈಗ ಕೇಂದ್ರ ಗೃಹ ಸಚಿವಾಲಯ ಸಡಿಲಿಸಿದೆ.
ವಿದೇಶಗಳಿಂದ ಭಾರತಕ್ಕೆ ಚಾರ್ಟರ್ಡ್ ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗೆ ಅ.15ರಿಂದ ಪ್ರವಾಸಿ ವೀಸಾ ನೀಡಲಾಗುವುದು. ಹಾಗೆಯೇ ಬೇರೆ ವಿಮಾನಗಳಲ್ಲಿ ಬರುವವರಿಗೆ ನ.16ರಿಂದ ಪ್ರವಾಸಿ ವೀಸಾ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಭಾರತಕ್ಕೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಕೊರೊನಾ ನಿಯಮ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಇದೇ ವೇಳೆ ದೇಶದಲ್ಲಿ ಬುಧವಾರದಿಂದ ಗುರುವಾರದವರೆಗೆ 22,431 ಪ್ರಕರಣಗಳು ದೃಢವಾಗಿದ್ದು, 318 ಸೋಂಕಿತರು ಸಾವನ್ನಪ್ಪಿದ್ದಾರೆ.
3 ತಿಂಗಳ ಬಗ್ಗೆ ಇರಲಿ ಎಚ್ಚರ :
ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸಾಲು ಸಾಲು ಹಬ್ಬಗಳಿದ್ದು, ಮದುವೆಯ ಸೀಸನ್ ಕೂಡ ಇರುವುದರಿಂದ ಜನರು ಸೋಂಕಿನ ಬಗ್ಗೆ ಎಚ್ಚರದಿಂದಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ಕೊರೊನಾ ಕಡಿಮೆಯಾಗಿದೆ ಎನ್ನುವ ಅಸಡ್ಡೆ ಬೇಡ. ಇನ್ನೂ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ. ಹೀಗಿರುವಾಗ ಜನರು ಗುಂಪು ಸೇರದೆ ಆನ್‌ಲೈನ್‌ನಲ್ಲೇ ಕಾರ್ಯಕ್ರಮಗಳನ್ನು ನಡೆಸಬೇಕು ಹಾಗೂ ಆನ್‌ಲೈನ್ ಶಾಪಿಂಗ್ ಅನ್ನೇ ಹೆಚ್ಚಾಗಿಸಿಕೊಳ್ಳಬೇಕು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರ್ವಾಲ್ ತಿಳಿಸಿದ್ದಾರೆ.