ಹೊಸದಿಲ್ಲಿ: 14ನೇ ಆವೃತ್ತಿಯ ಐಪಿಎಲ್ ಕೂಟ ಕೋವಿಡ್ ಕಾರಣದಿಂದ ಸದ್ಯಕ್ಕೆ ಅಮಾನತು ಮಾಡಲಾಗಿದೆ. ಫ್ರಾಂಚೈಸಿಗಳ ಬಯೋ ಬಬಲ್ ನಲ್ಲಿದ್ದ ಆಟಗಾರರು ಈಗ ತಮ್ಮ ಮನೆಗಳಿಗೆ ತೆರಳಬಹುದಾಗಿದೆ. ಆದರೆ ವಿದೇಶಿ ಆಟಗಾರರು ತೆರಳವುದು ಹೇಗೆ?
ಮೇ 15ಕ್ಕೂ ಮುನ್ನ ಭಾರತದಿಂದ ಆಗಮಿಸುವ ಪ್ರತಿಯೊಬ್ಬರಿಗೂ ಜೈಲು ಶಿಕ್ಷೆ ವಿಧಿಸುತ್ತೇನೆಂದು ಆಸ್ಟ್ರೇಲಿಯ ಸರ್ಕಾರ ಹೇಳಿದೆ, ವಿಮಾನಗಳನ್ನು ರದ್ದು ಮಾಡಿದೆ. ಈಗ ಬಿಸಿಸಿಐಗೆ ವಿದೇಶಿ ಆಟಗಾರರನ್ನು ಅವರವರ ದೇಶಗಳಿಗೆ ತಲುಪಿಸುವ ಚಿಂತೆ ಎದುರಾಗಿದೆ.
ನಾವು ಅದಕ್ಕಾಗಿ ಸೂಕ್ತ ಮಾರ್ಗವನ್ನು ಹುಡುಕುತ್ತೇವೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ,ತನ್ನ ಕ್ರಿಕೆಟಿಗರ ಸುರಕ್ಷಿತ ವಾಪಸಾತಿಗಾಗಿ ಬಿಸಿಸಿಐ ಜೊತೆಸೇರಿ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದೆ. ಇದು ಆಸೀಸ್ ಕ್ರಿಕೆಟಿಗರಿಗೆ ತುಸು ಸಮಾಧಾನ ತಂದಿದೆ.
ಇದನ್ನೂ ಓದಿ:ಡ್ಯಾಡಿ, ಮನೆಗೆ ಬನ್ನಿ: ವಾರ್ನರ್ ಪುತ್ರಿಯರ ಸಂದೇಶ
ದಕ್ಷಿಣ ಆಫ್ರಿಕಾದಲ್ಲಿ ವಿಮಾನಯಾನಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಭಾರತದಿಂದ ಆಗಮಿಸುವ ಕ್ರಿಕೆಟಿಗರು ಕಠಿನವಾದ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.ವಬಿಸಿಸಿಐ ಈ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಲಿದೆ ಎಂಬ ನಂಬಿಕೆ ಇದೆ ಎಂಬುದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯ ಹೇಳಿಕೆ.
ಸದ್ಯ ಕಾಂಗರೂ ನಾಡಿನ 14, ನ್ಯೂಜಿಲ್ಯಾಂಡಿನ 10, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ತಲಾ 11, ಕೆರಿಬಿಯನ್ ನಾಡಿನ 9, ಅಫ್ಘಾನ್‌ನ ಮೂವರು ಹಾಗೂ ಬಾಂಗ್ಲಾದ ಇಬ್ಬರು ಆಟಗಾರರಿದ್ದಾರೆ.