ಉಡುಪಿ: ವಿದೇಶಾಂಗ ಸಚಿವ ಡಾ| ಎಸ್.ಜೈಶಂಕರ್ ಅವರು ಉಡುಪಿ ಪ್ರವಾಸದಲ್ಲಿದ್ದು, ಶನಿವಾರ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮನೋಹರ್ ಎಸ್. ಕಲ್ಮಾಡಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್,ಉಡುಪಿ ಜಿಲ್ಲಾ ವಕ್ತಾರ ಕೆ ರಾಘವೇಂದ್ರ ಕಿಣಿ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀನಿಧಿ ಹೆಗಡೆ, ಪ್ರಬುದ್ಧರ ಪ್ರಕೋಷ್ಠದ ಸಂಚಾಲಕರಾದ ಪಾಂಡುರಂಗ ಲಾಗ್ವನ್ಕರ್, ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಭಾನುವಾರ(ಮಾ.19) ಬೆಳಗ್ಗೆ 8 ಗಂಟೆ 15 ನಿಮಿಷಕ್ಕೆ ವಿದೇಶಾಂಗ ಸಚಿವ ಜೈ ಶಂಕರ್ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.
ಡಾ| ಎಸ್.ಜೈಶಂಕರ್ ಅವರು ಎರಡು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಾಹೆ ವಿ.ವಿ.ಯ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಬೆಳಗ್ಗೆ 11 ಗಂಟೆಗೆ ಅಂಬಾಗಿಲಿನಲ್ಲಿರುವ ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಿರುವ “29ನೇ ಲೀಡರ್‌ಶಿಪ್ ಲೆಕ್ಚರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ಮಧು ವೀರರಾಘವನ್ ಇರಲಿದ್ದಾರೆ.
ಅಪರಾಹ್ನ 2 ಗಂಟೆಗೆ ಜಿಲ್ಲಾ ಬಿಜೆಪಿಯು ಮಣಿಪಾಲದ ಕಂಟ್ರಿಇನ್ ಹೊಟೇಲ್‌ನಲ್ಲಿ ಹಮ್ಮಿಕೊಂಡಿರುವ ಪ್ರಬುದ್ಧರ ಗೋಷ್ಠಿಯಲ್ಲಿ ಪಾಲ್ಗೊಂಡು ಸಂವಾದ ನಡೆಸಲಿದ್ದಾರೆ. ಸಚಿವರು,ಜಿಲ್ಲಾಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.