ಹೊಸದಿಲ್ಲಿ : ‘ಎಲ್ಲ ವಿದೇಶೀಯರು ಭಾರತೀಯ ಕಾನೂನನ್ನು ಗೌರವಿಸಬೇಕು. ಅವರು ಅದನ್ನು ಉಲ್ಲಂಘನೆ ಮಾಡಿದರೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ; ಹಾಗೆಂದು ಅವರನ್ನು ಸರಕಾರ ಎಂದೂ ಕಪ್ಪು ಪಟ್ಟಿಗೆ ಸೇರಿಸುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟನೆ ಹೇಳಿದೆ.
ರಾಯ್‌ಟರ್ ಸುದ್ದಿ ಸಂಸ್ಥೆಯ ಪತ್ರಕರ್ತ ವೀಸಾ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಆತನಿಗೆ ಭಾರತ ಪ್ರವೇಶ ನಿರಾಕರಿಸಲಾದುದರ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ಹೇಳಿಕೆ ನೀಡಿದೆ.
ರಾಯ್‌ಟರ್ ಸುದ್ದಿಸಂಸ್ಥೆಯ ದಿಲ್ಲಿ ಕಚೇರಿಯಲ್ಲಿ ಕಾರ್ಯನಿರತರಾಗಿರುವ ಕ್ಯಾಥಲ್ ಮೆಕ್‌ನಾಟನ್ ಅವರು ಈಚೆಗೆ ತಮ್ಮ ಸಾಗರೋತ್ತರ ಪ್ರವಾಸ ಮುಗಿಸಿ ಮರಳಿದ ಸಂದರ್ಭದಲ್ಲಿ ವೀಸಾ ನಿಮಯ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ವಿಮಾನ ನಿಲ್ದಾಣದಿಂದಲೇ ಹಿಂದಕ್ಕೆ ಕಳುಹಿಸಲಾಗಿತ್ತು. ‘ಆತನ ವಿರುದ್ಧದ ಈ ಕಾನೂನು ಕ್ರಮವು ಶಾಶ್ವತ ಸ್ವರೂಪದ್ದಲ್ಲ; ಇದನ್ನು ಆರು ತಿಂಗಳು ಅಥವಾ ವರ್ಷದ ಬಳಿಕ ಪುನರ್ ವಿಮರ್ಶಿಸಬಹುದಾಗಿದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.
‘ಭಾರತದಲ್ಲಿರುವಂತೆ ವಿದೇಶದಲ್ಲೂ, ಅಲ್ಲಿಗೆ ಹೋಗುವ ಭಾರತೀಯ, ಅಲ್ಲಿನ ಕಾನೂನು ಉಲ್ಲಂಘನೆ ಮಾಡಿದಾಗ ಆತನೂ ಅಲ್ಲಿನ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾನೆ’ ಎಂದು ಅಧಿಕಾರಿ ಹೇಳಿದರು.
ಐರಿಷ್ ಪ್ರಜೆಯಾಗಿರುವ ಮೆಕ್‌ನಾಟನ್ ಅವರು 2018ರ ಪುಲಿಟ್ಜರ್ ಪ್ರಶಸ್ತಿಯನ್ನು ಕಳೆದ ಮೇ ತಿಂಗಳಲ್ಲಿ ಪಡೆದವರಾಗಿದ್ದಾರೆ.
ಮೆಕ್‌ನಾಟನ್ ಅವರು ಯಾವುದೇ ಪೂರ್ವಾನುಮತಿ ಇಲ್ಲದೆ ಜಮ್ಮು ಕಾಶ್ಮೀರದ ನಿರ್ಬಂಧಿತ ಮತ್ತು ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮತ್ತು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಅವರು ಅಲ್ಲಿಂದಲೇ ವರದಿಯನ್ನೂ ಮಾಡಿದ್ದರು.