ಬೆಳಗಾವಿ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಬ್ಬರದಲ್ಲಿ ರಾಜ್ಯ ಸರಕಾರ ಮುಳುಗಿರುವಾಗಲೇ, ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರೀ ಇಳಿಕೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ರಾಜ್ಯ ಹಣಕಾಸಿನ ಮಧ್ಯಮ ವರ್ಷದ ಪರಿಶೀಲನೆ ವರದಿಯಲ್ಲಿ ಈ ಅಂಶ ಉಲ್ಲೇಖವಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ವಿಧಾನಸಭೆಯಲ್ಲಿ ಗುರುವಾರ ಮಂಡನೆಯಾದ ಈ ವರದಿಯಲ್ಲಿ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಂಡಿದೆ. ಫಲಾನುಭವಿ ಕುಟುಂಬಗಳಿಗೆ ಮಾಸಿಕ ಸರಾಸರಿ 5,000 ರೂ. ಸರಕಾರ ನೀಡುವುದರಿಂದ ಕೊಳ್ಳುವ ಸಾಮರ್ಥ್ಯ ವೃದ್ಧಿಸಿ ಅವರು ಆರ್ಥಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತದೆ. ಇದರಿಂದ ಜಿಡಿಪಿ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಬೆನ್ನುತಟ್ಟಿಕೊಳ್ಳಲಾಗಿದೆಯಾದರೂ ನೇರ ಬಂಡವಾಳ ಹೂಡಿಕೆಯ ಇಳಿಕೆ ಎಚ್ಚರಿಕೆಯ ಗಂಟೆಯಾಗಿದೆ.
ಮುಂದುವರಿದ ದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದರಿಂದ ಎಫ್ಡಿಐ ಶೇ.46ರಷ್ಟು ಇಳಿಕೆಯಾಗಿದೆ ಎಂದು ವರದಿ ಹೇಳಿದೆ. 2022-23ರ ಮೊದಲಾರ್ಧದಲ್ಲಿ ಹೂಡಿಕೆಯಾಗಿದ್ದ 5.3 ಶತಕೋಟಿ ಡಾಲರ್‌ಗೆ ಪ್ರತಿಯಾಗಿ 2023-24ರ ಮೊದಲಾರ್ಧದಲ್ಲಿ 2.8 ಶತ ಕೋಟಿ ಡಾಲರ್ ಮಾತ್ರ ಹೂಡಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2.8 ಶತ ಕೋಟಿ ಡಾಲರ್ ಇಳಿಕೆಯಾಗಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಸ್ಟಾರ್ಟ್ ಅಪ್ ಹಾಗೂ ಐಟಿ ಕ್ಷೇತ್ರದ ವಿದೇಶಿ ಹೂಡಿಕೆ ಕುಸಿತ ಇದಕ್ಕೆ ಪ್ರಮುಖ ಕಾರಣ. 2022-23ರ ಮೊದಲ ತ್ರೈಮಾಸಿಕದಲ್ಲಿ 6.6 ಶತ ಕೋಟಿ ಡಾಲರ್‌ನಿಂದ 2023-24ರ ಮೊದಲ ತ್ರೈ ಮಾಸಿಕದಲ್ಲಿ 1.9 ಶತ ಕೋಟಿ ಡಾಲರ್‌ನಷ್ಟು ಸ್ಟಾರ್ಟ್ ಅಪ್ ಹೂಡಿಕೆ ದೇಶದಲ್ಲಿ ಕಡಿಮೆಯಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಶೇ.70ರಷ್ಟು ಇಳಿಕೆಯಾಗಿದೆ. ಇದರ ಪರಿಣಾಮ ದೇಶದ ಸ್ಟಾರ್ಟ್ ಅಪ್ ರಾಜಧಾನಿ ಎಂದು ಹೆಸರಾದ ಬೆಂಗಳೂರಿನ ಮೇಲೂ ಆಗಿದೆ.
ಬೆಂಗಳೂರಿನ ಸ್ಟಾರ್ಟ್ ಅಪ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 2022-23ರ ಮೊದಲ ತ್ರೈಮಾಸಿಕದಲ್ಲಿ 3.4 ಶತಕೋಟಿ ಡಾಲರ್‌ನಷ್ಟಿದ್ದ ವಿದೇಶಿ ಬಂಡವಾಳ ಹೂಡಿಕೆ 2023-24ರ ಮೊದಲ ತ್ರೈಮಾಸಿಕದಲ್ಲಿ 0.6 ಶತಕೋಟಿ ಡಾಲರ್‌ಗೆ, ಅಂದರೆ ಶೇ.80ರಷ್ಟು ಇಳಿಕೆಯಾಗಿದೆ. ಕಂಪ್ಯೂಟರ್ ತಂತ್ರಾಂಶ ಮಾರುಕಟ್ಟೆ ಮತ್ತು ಸೇವಾ ವಲಯದಲ್ಲಿ 4 ಶತಕೋಟಿ ಡಾಲರ್ ಇಳಿಕೆಯಾಗಿದೆ. ವಿದೇಶಿ ನೇರ ಹೂಡಿಕೆಯ ಕುಸಿತ ರಾಜ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
1.17 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ
ರಾಜ್ಯದಲ್ಲಿ 1.17 ಕೋಟಿ ಮಹಿಳೆಯರು ಗೃಹ ಲಕ್ಷ್ಮಿಯೋಜನೆ ಫಲಾನುಭವಿಗಳಾಗಿದ್ದು, ಗ್ಯಾರಂಟಿ ಯೋಜನೆಗಳಿಗಾಗಿ 36,607 ಕೋಟಿ ರೂ. ನಿಗದಿ ಮಾಡಲಾಗಿದೆ. ಗೃಹ ಲಕ್ಷ್ಮಿಯೋಜನೆಗಾಗಿ ಬಜೆಟ್‌ನಲ್ಲಿ 17,500 ಕೋಟಿ ರೂ. ಮೀಸಲಿಡಲಾಗಿದೆ.