Advertisement
‘ಎಕ್ಸ್‌ಪೀರಿಯನ್ಸ್ ಎತ್ನಿಕ್ ಕ್ಯುಸೀನ್’ ಎಂಬ ಹೆಸರಿನಲ್ಲಿ ಕೇರಳದಲ್ಲಿ ಆರಂಭಿಸಲಾಗುವ ನೂತನ ಯೋಜನೆಗೆ ರಾಜ್ಯ ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಆಡಳಿತಾನುಮತಿ ನೀಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ 2 ಸಾವಿರ ಮನೆಗಳನ್ನು ಪ್ರಾಥಮಿಕ ಹಂತದಲ್ಲಿ ಯೋಜನೆಯ ಅಂಗವಾಗಿಸಲಾಗುವುದು. ಕೇರಳೀಯ ಗ್ರಾಮಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳ ಪ್ರಧಾನ ಕೇಂದ್ರವಾಗಿಸುವ ಉದ್ದೇಶದಿಂದ ಯೋಜನೆ ಸಿದ್ಧಪಡಿಸಲಾಗಿದೆ.
ಮನೆಗಳಿಗೆ ವಿದೇಶಿ ಅತಿಥಿಗಳನ್ನು ಪರಂಪರಾಗತ ಶೈಲಿಯಲ್ಲಿ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಕೇರಳ ಶೈಲಿಯ ಆಹಾರ ಸಿದ್ಧಪಡಿಸುವ ಸಮೂಹವೊಂದನ್ನು ರಾಜ್ಯದಾದ್ಯಂತ ಸ್ಥಾಪಿಸಲಾಗುವುದು. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಸಹಿತವಾಗಿ ಈ ಸಮೂಹವನ್ನು ವಿದೇಶೀಯರಿಗೆ ಪರಿಚಯಮಾಡಿಕೊಡಲಾಗುವುದು. ಈ ಯೋಜನೆ ಮೂಲಕ ಕನಿಷ್ಠ 30 ಸಾವಿರದಿಂದ 50 ಸಾವಿರ ಮಂದಿಗೆ ಮೂರು ವರ್ಷಗಳಲ್ಲಿ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಉದ್ಯೋಗ ಲಭಿಸಲಿದೆ. ಇವರಲ್ಲಿ ಬಹುಪಾಲು ಮಹಿಳೆಯರೇ ಇರುವರು ಎಂಬುದು ಗಮನಾರ್ಹ ವಿಚಾರ. ಮಾಹಿತಿ ತಂತ್ರಜ್ಞಾನದ ಬಳಕೆ ಮೂಲಕ ಕನಿಷ್ಠ ಅವಧಿಯಲ್ಲಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳ್ಳಲಿದೆ. ಹಿನ್ನೆಲೆ
ಕೇರಳೀಯ ಶೈಲಿಯ ಆಹಾರ ಸಂಸ್ಕೃತಿ, ಅಡುಗೆ, ಆಹಾರ ಸೇವನೆ ರೀತಿ ಅನನ್ಯವಾದುದು. ಆದರೆ ಆಧುನಿಕ ಫಾಸ್ಟ್ ಫುಡ್ ಶೈಲಿ ರಾಜ್ಯದಾದ್ಯಂತ ಹರಡುತ್ತಿದ್ದು, ಪರಂಪರಾಗತ ಶೈಲಿಗೆ ತಡೆಯಾಗಿದೆ. ರಾಜ್ಯದ ಬಹುತೇಕ ಕಿರು ಹೋಟೆಲ್ಗಳಲ್ಲಿ ಕೂಡ ಇಂದು ಪರಂಪರಾಗತ ಶೈಲಿಯ ಆಹಾರ ಅಲಭ್ಯವಾಗಿದೆ. ವಿದೇಶೀಯರು ನಮ್ಮ ದೇಶಕ್ಕೆ ಆಗಮಿಸುವ ವೇಳೆ ಸಹಜವಾಗಿ ಸ್ಥಳೀಯ ಶೈಲಿಯನ್ನು ನಿರೀಕ್ಷಿಸುತ್ತಾರೆ. ಇವರಲ್ಲಿ ಬಹುತೇಕ ಮಂದಿ ಈ ಪರಂಪರೆಯ ಬಗ್ಗೆ ಅಧ್ಯಯನ ನಡೆಸಲು ಉತ್ಸುಕರಾಗಿರುತ್ತಾರೆ. ದುರಾದೃಷ್ಟrವಶಾತ್ ರಾಜ್ಯದಲ್ಲಿ ಈ ವರೆಗೆ ಇದಕ್ಕೆ ಪೂರಕ ವಾತಾವರಣ ಇರಲಿಲ್ಲ. ಈ ಯೋಜನೆ ಮೂಲಕ ರಾಜ್ಯದ ಬ್ರಾಂಡಿಂಗ್ ಘಟಕಗಳಲ್ಲಿ ಪರಂಪರಾಗತ ಶೈಲಿಯ ಆಹಾರ ವ್ಯವಸ್ಥೆ ಪ್ರಧಾನವಾಗಿರುವುದು.
Related Articles
ಈ ಯೋಜನೆಯಲ್ಲಿ ನೋಂದಣಿ ನಡೆಸುವ ಎಲ್ಲ ಮನೆಗಳನ್ನು ಪ್ರವಾಸೋದ್ಯಮ ಮಿಷನ್ ಜಿಲ್ಲಾ ಸಂಚಾಲಕ ಸೇರಿರುವ ಸಮಿತಿ ಸಂದರ್ಶನ ನಡೆಸಿ ಅವಲೋಕನ ಮಾಡಿ ನಿಗದಿಪಡಿಸಲಿದೆ. ಅದಕ್ಕಾಗಿ ಯೋಜನೆಯಲ್ಲಿ ನೋಂದಣಿ ನಡೆಸುವ ಮಂದಿಗೆ ಆಯಾ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗುವುದು. ಇಬ್ಬರು ಸದಸ್ಯರಿರುವ ಒಂದು ಕುಟುಂಬ ಒಬ್ಬ ಸಹಾಯಕ/ಸಹಾಯಕಿಯ ಸಹಾಯದೊಂದಿಗೆ 30 ಮಂದಿಗಿರುವ ಕೇರಳೀಯ ಆಹಾರ ಸಿದ್ಧಮಾಡಿಕೊಡುವ ಮೂಲಕ ಶಾಶ್ವತ ಆದಾಯ ಒದಗಲಿದೆ. ಇದನ್ನು ನಡೆಸುವ ರೀತಿಯನ್ನು ತರಬೇತಿಯಲ್ಲಿ ತಿಳಿಸಲಾಗುವುದು.
Advertisement
ಇದಕ್ಕೆ ಅಗತ್ಯವಿರುವ ಬಂಡವಾಳ ಹೂಡಿಕೆಯ ಸರಿಸುಮಾರು ರೂಪುರೇಷೆಯನ್ನೂ ಒದಗಿಸಲಾಗುವುದು. ಅನಂತರ ಅಗತ್ಯದ ಸಿದ್ಧತೆಗಳಿಗಾಗಿ ಒಂದು ತಿಂಗಳ ಅವಧಿ ನೀಡಲಾಗುವುದು. ಈ ಯೋಜನೆಯಲ್ಲಿ ನೋಂದಣಿ ನಡೆಸುವ ಯೂನಿಟ್‌ಗಳು ಕಡ್ಡಾಯವಾಗಿ ಪ್ರಾಥಮಿಕ ಕೃತ್ಯಗಳ ನಿರ್ವಹಣೆಯ ಸೌಲಭ್ಯ ಒದಗಿಸಬೇಕು. ಪರಿಶೀಲನೆಯ ಅನಂತರ ಅಂಗೀಕಾರ ಪಡೆಯುವ ಪ್ರತಿ ವ್ಯವಸ್ಥಾಪಕನ ಲೊಕೇಶನ್, ಫೋಟೋ, ಮೊಬೈಲ್ ನಂಬರ್ ಇತ್ಯಾದಿ ಮಾಹಿತಿ ಕೇರಳ ಟ್ಯೂರಿಸಂ ವೆಬ್‌ಸೈಟ್‌ನಲ್ಲಿ, ಮೊಬೈಲ್ ಆ್ಯಪ್‌ನಲ್ಲಿ ಸೇರ್ಪಡೆಗೊಳಿಸಲಾಗುವುದು.
ಈ ಯೋಜನೆಯ ಮೊದಲ ಹಂತ ಜುಲೈ ತಿಂಗಳನಲ್ಲಿ ಆರಂಭಗೊಳ್ಳಲಿದೆ. ಆಸಕ್ತ ಗೃಹಿಣಿಯರು, ಕುಟುಂಬಗಳು ಜು.25ರ ಮುಂಚಿತವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಟ್ಯೂರಿಸಂ ಮಿಷನ್ ಕಚೇರಿಯಲ್ಲಿ ಯಾ ಜಿಲ್ಲಾ ಪ್ರವಾಸೋದ್ಯಮ ಕಚೇರಿಗಳಲ್ಲಿ ನೋಂದಣಿ ನಡೆಸಬಹುದು. ಅಂಗೀಕೃತ ಹೋಂ ಸ್ಟೇಗಳೂ ಈ ಯೋಜನೆಯ ಭಾಗವಾಗಬಹುದು. ಮಾಹಿತಿಗೆ ಟ್ಯೂರಿಸಂ ಮಿಷನ್ ಕಾಸರಗೋಡು ಜಿಲ್ಲಾ ಸಂಚಾಲಕ ದೂರವಾಣಿ-9847398283 ಸಂಪರ್ಕಿಸಬಹುದು.
ಯೋಜನೆಯ ಮೂಲಕದ ಸಾಧನೆಗಳು 1. ಪ್ರತ್ಯಕ್ಷವಾಗಿ, ಪರೋಕ್ಷವಾಗಿ 8 ಸಾವಿರ ಮಂದಿಗೆ ಉದ್ಯೋಗ ಒದಗಿಸುವ 2 ಸಾವಿರ ಆಹಾರ ಸಮೂಹ ಪ್ರಾಥಮಿಕ ಹಂತದಲ್ಲಿ ರಚನೆಗೊಳ್ಳಲಿದೆ. 2ನೇ ಹಂತದಲ್ಲಿ ಈ ಸಮೂಹ ಕನಿಷ್ಠ 30 ಸಾವಿರದಿಂದ 50 ಸಾವಿರ ಮಂದಿಗೆ ಪ್ರತ್ಯಕ್ಷವಾಗಿಯೇ ಉದ್ಯೋಗ ಒದಗಿಸಲಿದೆ. 2. ಕೇರಳೀಯ ಸಾಂಪ್ರದಾಯಿಕ ಶೈಲಿಯ ಆಹಾರ ವಿದೇಶೀಯರಿಗೆ ಪರಿಚಯಿಸಲು ಅವಕಾಶ ಲಭಿಸಲಿದೆ. 3. ಮಹಿಳಾ ಪ್ರಬಲೀಕರಣಕ್ಕೆ ಪೂರಕ ಯೋಜನೆ. 4. ಗ್ರಾಮೀಣ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪ್ರಬಲೀಕರಣ ಲಭಿಸಲಿದೆ. 5. ಪ್ರವಾಸೋದ್ಯಮದ ಪ್ರಯೋಜನಗಳನ್ನು ಸ್ಥಳೀಯರಿಗೆ ಒದಗಿಸುವುದು. 6. ಪ್ರವಾಸೋದ್ಯಮ ಮಿಷನ್ ಅಂಗವಾಗಿ ನೋಂದಣಿ ನಡೆಸಿರುವ ವಿವಿಧ ಯೂನಿಟ್‌ಗಳು, ಚಿಪ್ಸ್ ಯೂನಿಟ್‌ಗಳು, ಹಪ್ಪಳ ಯೂನಿಟ್‌ಗಳು, ತರಕಾರಿ, ಹಾಲು, ಮೊಟ್ಟೆ ಉತ್ಪಾದನೆ ಯೂನಿಟ್‌ಗಳಿಗೆ ಆದಾಯ ಲಭಿಸಲಿವೆ.