Advertisement

ವಿದೇಶಿ ತಜ್ಞರಿಂದ ಬೆಳ್ಳಂದೂರು ಕೆರೆ ಪರಿಶೀಲನೆ

11:43 AM Mar 25, 2017 | Team Udayavani |

ಬೆಂಗಳೂರು: ಪದೇಪದೆ ನೊರೆ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬೆಳ್ಳಂದೂರು- ವರ್ತೂರು ಕೆರೆ ಅಭಿವೃದ್ಧಿಯ ಜವಾಬ್ದಾರಿ ಯನ್ನು ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದೆ ಎಂದು ನಿಗಮದ ಅಧ್ಯಕ್ಷ ಸಿ.ಎಂ.ಧನಂಜಯ ತಿಳಿಸಿದ್ದಾರೆ. 

Advertisement

ಮಹದೇವಪುರದ ಬಳಿಯ ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶಿ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜಲ ಸಮಸ್ಯೆ ಮುಕ್ತ ಬೆಂಗಳೂರು ನಿರ್ಮಾಣ ಮಾಡುವ ಉದ್ದೇಶದಿಂದ ಬೆಳ್ಳಂದೂರು-ವರ್ತೂರು ಕೆರೆಯ ಅಭಿವೃದ್ಧಿಯನ್ನು ನಿಗಮದಿಂದ ನಡೆಸಲು ತೀರ್ಮಾನಿಸಿದ್ದು, ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.

ಮನವಿಯನ್ನು ಪರಿಶೀಲಿಸುವಂತೆ ಪೌರಾಡಳಿತ ಇಲಾಖೆಗೆ ಸರ್ಕಾರ ರವಾನಿಸಿದ್ದು, ಅನುಮತಿ ಸಿಕ್ಕ ಕೂಡಲೇ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. ಕೆರೆ ಅಭಿವೃದ್ಧಿಪಡಿಸಲು ಬೇಕಾದಂತಹ ಮಾನವ ಸಂಪನ್ಮೂಲ, ತಂತ್ರಜ್ಞಾನ ಸೇರಿ ಎಲ್ಲ ವ್ಯವಸ್ಥೆಗಳು ನಿಗಮದಲ್ಲಿದೆ. ಜತೆಗೆ ವಿವಿಧ ಐಟಿ-ಬಿಟಿ, ಕೈಗಾರಿಕೆಗಳು ಮತ್ತು ಉದ್ಯಮಿಗಳು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿಯಲ್ಲಿ ಅಭಿವೃದ್ಧಿಗೆ ಸಹಾಯ ಮಾಡಲು ಸಿದ್ಧರಿದ್ದಾರೆ.

ನಿಗಮ ನೋಡಲ್‌ ಸಂಸ್ಥೆಯಾಗಿದ್ದು, ಏಕಗವಾಕ್ಷಿ ಪದ್ಧತಿಯಡಿಯಲ್ಲಿ ಕಾಮಗಾರಿಗಳನ್ನು ನಡೆಸಲು ಸಹಾಯಕವಾಗುತ್ತದೆ ಎಂದು ಹೇಳಿದರು.  ಇಸ್ರೇಲ್‌ ಮತ್ತು ಲಂಡನ್‌ ಮೂಲಕ ಕಂಪನಿಗಳು ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರಚಿಸಲು ಮುಂದಾಗಿದ್ದು, ಇದರೊಂದಿಗೆ ತಜ್ಞರ ಸಮಿತಿಯಿಂದ ಸಲ್ಲಿಕೆಯಾಗಿರುವ ವರದಿಯಲ್ಲಿನ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.

ಕೆರೆ ಅಭಿವೃದ್ಧಿಯ ಜವಾಬ್ದಾರಿ ಬಿಬಿಎಂಪಿ ಮತ್ತು ಬಿಡಿಎಗೆ ಸ್ಥಳಾಂತರ ಮಾಡುವುದರಿಂದ ಕೆರೆಯ ಅಭಿವೃದ್ಧಿ ಕುಂಠಿತವಾಗುತ್ತದೆಂಬ ವಾದವಿದೆ. ಹೀಗಾಗಿ ನಿಗಮಕ್ಕೆ ಕೆರೆಯ ಅಭಿವೃದ್ಧಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ನವೀನ ರಾಜಸಿಂಗ್‌, ಇಸ್ರೇಸ್‌ ಮತ್ತು ಲಂಡನ್‌ ಮೂಲದ ತಜ್ಞರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next