Advertisement

Raamana Avathaara Movie Review: ಕಾಮಿಡಿ ಹಾದಿಯಲ್ಲಿ ರಾಮ ಜಪ

10:58 AM May 11, 2024 | Team Udayavani |

ಆತನಿಗೆ ಊರು ಉದ್ಧಾರ ಮಾಡಬೇಕು, ಊರ ಜನರಿಂದ ಭೇಷ್‌ ಎನ್ನಿಸಿಕೊಳ್ಳಬೇಕು ಎಂಬ ಆಸೆ. ಅದಕ್ಕಾಗಿ ಆತ ನಾನಾ ಕಾರ್ಯಗಳನ್ನು ಮಾಡುತ್ತಿರುತ್ತಾನೆ. ಹಾಗಂತ ಮಾಡುವ ಕಾರ್ಯ ಎಲ್ಲವೂ ಯಶಸ್ಸು ಕಾಣಬೇಕೆಂದಿಲ್ಲ, ಕೆಲವೊಮ್ಮೆ ಉಲ್ಟಾ ಆಗಿ ಆತನೇ ಸಂಕಷ್ಟಕ್ಕೆ ಸಿಲುಕುತ್ತಾನೆ..

Advertisement

ಈ ವಾರ ತೆರೆಕಂಡಿರುವ “ರಾಮನ ಅವತಾರ’ ಚಿತ್ರ ಒಂದು ಕಾಮಿಡಿ ಹಾದಿಯಲ್ಲಿ ಸಾಗುತ್ತಲೇ, ಒಂದಷ್ಟು ವಿಷಯಗಳನ್ನು ತೆರೆದಿಟ್ಟಿದೆ.

ಇಲ್ಲಿನ ನಾಯಕನ ವಿವಿಧ ಅವತಾರಗಳು ಈ ಸಿನಿಮಾದ ಜೀವಾಳ. ಆ ಸನ್ನಿವೇಶಗಳು ಹಾಗೂ ಅಲ್ಲಿನ ಸಂಭಾಷಣೆಗಳು ಪ್ರೇಕ್ಷಕನಿಗೆ ನಗೆ ಉಕ್ಕಿಸುತ್ತವೆ. ಕಾಮಿಡಿಯಾಗಿ ಜೊತೆಗೆ ಒಂದಷ್ಟು ನೀತಿಪಾಠಗಳ ಜೊತೆಗೆ ಸಾಗುವ ಸಿನಿಮಾದಲ್ಲಿ ಬರುವ ಟ್ವಿಸ್ಟ್‌ಗಳು ಈ ಚಿತ್ರದ ಜೀವಾಳ.

ಚಿತ್ರದ ಮೊದಲರ್ಧದಲ್ಲಿ ನಾಯಕ “ಕಾರ್ಯ’ಕ್ರಮಗಳು, ಎಡವಟ್ಟುಗಳ ಮೂಲಕ ಸಾಗುವ ಸಿನಿಮಾ ದ್ವಿತೀಯಾರ್ಧದಲ್ಲಿ ಮಗ್ಗುಲು ಬದಲಿಸುತ್ತದೆ. ಇಲ್ಲೊಂದಿಷ್ಟು ಗಂಭೀರ ವಿಚಾರಗಳು, ಸಂದಿಗ್ಧತೆಗಳು ತೆರೆದುಕೊಂಡು ಒಂದಷ್ಟು ಕುತೂಹಲಕ್ಕೆ ದಾರಿ ಮಾಡಿವೆ.

ಹಾಗಂತ ನಿರ್ದೇಶಕರ ಮೂಲ ಉದ್ದೇಶ ನಗು. ತರ್ಲೆ, ತಮಾಷೆ, ಜಾಲಿಯಾಗಿಯೇ ಕಥೆಯನ್ನು ಹೇಳಬೇಕು ಎಂಬ ನಿರ್ಧಾರ ಅವರದು. ಆ ಕಾರಣದಿಂದಲೇ ಕಥೆ ಹೆಚ್ಚು ಭಾರವಾಗದೇ “ಜಾಲಿರೈಡ್‌’ ಮಾಡಿದೆ.

Advertisement

ಇನ್ನು ಮಾಡರ್ನ್ರಾಮನ ಮೂಲಕ ರಾಮಾಯಣದ ಕೆಲವು ಮೌಲ್ಯಗಳನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಚಿತ್ರದ ಮೂಲ ಪರಿಕಲ್ಪನೆ ಚೆನ್ನಾಗಿದೆಯಾದರೂ ಅದನ್ನು ಇನ್ನೊಂದಿಷ್ಟು ಆಸಕ್ತಿದಾಯಕವಾಗಿ ತೋರಿಸುವ ಅವಕಾಶ ನಿರ್ದೇಶಕರಿಗಿತ್ತು. ಹುಟ್ಟೂರಲ್ಲೇ ಉದ್ಯೋಗ ಸೃಷ್ಟಿಯಾದರೆ ಆ ಊರು ಉದ್ಧಾರ ಆಗುತ್ತದೆ ಎಂಬ ಆಶಯವೂ ಈ ಸಿನಿಮಾದಲ್ಲಿದೆ.

ನಾಯಕ ರಿಷಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ತರ್ಲೆ, ತುಂಟತನದಿಂದ ಕೂಡಿದ ಪಾತ್ರ ಅವರದು.ಉಳಿದಂತೆ ಪ್ರಣೀತಾ, ಶುಭ್ರ, ಅರುಣ್‌ ಸಾಗರ್‌ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ.

  ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next