Advertisement

ಇತಿಹಾಸ ಸೃಷ್ಟಿಸಿದ ವಿದೇಶಿ ವಿನಿಮಯ ಸಂಗ್ರಹ

12:34 PM Jun 17, 2020 | mahesh |

ಒಂದು ಕಡೆ ಕೋವಿಡ್ ದಿಂದ ರುದ್ರನರ್ತನ ನಡೆಯುತ್ತಿದೆ. ಅದರ ಪರಿಣಾಮವಾಗಿ ಜಿಡಿಪಿ ಕುಸಿದಿದೆ. ಉದ್ಯಮರಂಗ ಹತಾಶವಾಗಿದೆ. ಇಷ್ಟೆಲ್ಲದರ ಮಧ್ಯೆ ಒಂದು ಐತಿಹಾಸಿಕ ಸಂಭ್ರಮವೊಂದು ಬಹುತೇಕರ ಗಮನ ಸೆಳೆದಿಲ್ಲ. ಜೂ.5ರ ಹೊತ್ತಿಗೆ ದೇಶದ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ವಿದೇಶಿ ವಿನಿಮಯ (ಫಾರೆಕ್ಸ್‌) ಸಂಗ್ರಹವಾಗಿದೆ. 1991ರಂದು ವಿದೇಶಿ ವಿನಿಮಯ ಸಂಗ್ರಹ ಕುಸಿದು, ಚಿನ್ನ ಅಡವಿಟ್ಟು ಸಾಲ ತರಬೇಕಾದ ದುಸ್ಥಿತಿಯನ್ನು ಭಾರತ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ಈ ಏರಿಕೆಗೆ ಕಾರಣಗಳು, ಮಹತ್ವಗಳು, ಹಳೆಯ ನೆನಪುಗಳು ಇಲ್ಲಿವೆ.

Advertisement

38 ಲಕ್ಷ ಕೋಟಿ ರೂ. ಸಂಗ್ರಹ
ಜೂ.5ರ ಹೊತ್ತಿಗೆ ಭಾರತದ ವಿದೇಶ ವಿನಿಮಯ ಸಂಗ್ರಹ ಪ್ರಮಾಣ 38.169 ಲಕ್ಷ ಕೋಟಿ ರೂ. (501.9 ಬಿಲಿಯನ್‌ ಡಾಲರ್‌) ಮುಟ್ಟಿದೆ. ಇದು
ಭಾರತದ ಇತಿಹಾಸದಲ್ಲೇ 500 ಬಿಲಿಯನ್‌ ಡಾಲರ್‌ ಗಡಿದಾಟಿದ ಮೊದಲ ಉದಾಹರಣೆ. ಬರೀ ಜೂ.5ರ ವಾರಾಂತ್ಯದಲ್ಲೇ 62,365 ಕೋಟಿ ರೂ. (8.2 ಬಿಲಿಯನ್‌ ಡಾಲರ್‌) ಏರಿಕೆಯಾಗಿತ್ತು. ಇನ್ನು ಮಾರ್ಚ್‌ ತಿಂಗಳಲ್ಲಿ ದಿಗ್ಬಂಧನ ಘೋಷಣೆಯಾದ ನಂತರದಿಂದ ಜೂ.5ವರೆಗೆ 2.418 ಲಕ್ಷ ಕೋಟಿ ರೂ. (31.8 ಬಿಲಿಯನ್‌ ಡಾಲರ್‌) ಏರಿಕೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಇದೊಂದೇ ಭಾರತಕ್ಕೆ ಆಶಾಕಿರಣ.

ಆರ್‌ಬಿಐ ಪಾತ್ರವೇನು?
ವಿದೇಶಿ ವಿನಿಮಯದ ರಕ್ಷಕನಂತೆ ಆರ್‌ಬಿಐ ಇರುತ್ತದೆ. ರೂಪಾಯಿಯ ಸರಿಯಾದ ಹರಿವಿಗೆ ನೆರವು ನೀಡುವುದು ಇದರ ಮುಖ್ಯ ಕೆಲಸ. ರೂಪಾಯಿ ಮಾರುಕಟ್ಟೆಯಲ್ಲಿ ಅಪಮೌಲ್ಯ ಗೊಂಡಾಗ, ಆರ್‌ಬಿಐ ಡಾಲರನ್ನು ಮಾರುತ್ತದೆ. ರೂಪಾಯಿ ಮೌಲ್ಯ ಏರಿದಾಗ ಡಾಲರನ್ನು ಕೊಂಡುಕೊಳ್ಳುತ್ತದೆ. ಒಟ್ಟಿನಲ್ಲಿ ಎರಡನ್ನೂ ಸಮತೂಕದಲ್ಲಿಡುತ್ತದೆ.

ಎಲ್ಲಿ ಸಂಗ್ರಹಿಸಿಡಲಾಗುತ್ತದೆ?
1934ರ, ಆರ್‌ಬಿಐ ಕಾಯ್ದೆಯಲ್ಲಿ ವಿದೇಶಿ ವಿನಿಮಯ ಸಂಗ್ರಹ ಎಲ್ಲಿರಬೇಕೆಂಬ ಬಗ್ಗೆ ಕಾನೂನು ಚೌಕಟ್ಟಿದೆ. ವಿವಿಧ ದೇಶಗಳ ಕರೆನ್ಸಿ ಸಂಗ್ರಹದ ಶೇ.64ರಷ್ಟನ್ನು,
ಅನ್ಯದೇಶಗಳ ಟ್ರೆಶರಿ ಬಿಲ್‌ ಗಳಂತಹ (ಅಮೆರಿಕ, ಇಂಗ್ಲೆಂಡ್‌ ನಂತಹ ದೇಶಗಳು ರಿಯಾಯಿತಿ ದರದಲ್ಲಿ ನೀಡುವ ಪತ್ರ) ಭದ್ರತೆ ಖರೀದಿಗೆ ಬಳಸಲಾಗುತ್ತದೆ.
ಬಹುತೇಕ ಹಣವನ್ನು ಅಮೆರಿಕದಲ್ಲೇ ಹೂಡಲಾಗುತ್ತದೆ. ಇನ್ನು ವಿದೇಶಗಳ ಕೇಂದ್ರ ಬ್ಯಾಂಕ್‌ಗಳಲ್ಲಿ ಶೇ.28ರಷ್ಟು, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಶೇ.7.4ರಷ್ಟನ್ನು ಠೇವಣಿ ಇಡಲಾಗುತ್ತದೆ. ಭಾರತ ಸರ್ಕಾರ 653.01 ಟನ್‌ ಚಿನ್ನ ಹೊಂದಿದೆ. ಇದರಲ್ಲಿ 360.71 ಟನ್‌ ಇಂಗ್ಲೆಂಡ್‌ ಬ್ಯಾಂಕ್‌ನಲ್ಲಿ ಇಡಲ್ಪಟ್ಟಿದೆ. ಉಳಿದದ್ದು ಭಾರತದಲ್ಲೇ ಇದೆ.

1991ರ ದುಸ್ಥಿತಿ ಏನಿತ್ತು?
1980ರ ದಶಕದ ಮಧ್ಯಭಾಗದಲ್ಲಿ ಹಣ ಪಾವತಿ ಮಾಡಲು ಒದ್ದಾಡುವ ಪರಿಸ್ಥಿತಿ ಭಾರತಕ್ಕಿತ್ತು. 80ರ ದಶಕದ ಅಂತ್ಯದಲ್ಲಂತೂ ಪರಿಸ್ಥಿತಿ ವಿಕೋಪಕ್ಕೆ
ಹೋಗಿತ್ತು. ಇದೇ ವೇಳೆ ಕೊಲ್ಲಿ ರಾಷ್ಟ್ರಗಳಲ್ಲಿ ಆಂತರಿಕ ಕಲಹ ಶುರುವಾಗಿತ್ತು. ಪರಿಣಾಮ ಭಾರತದ ತೈಲ ಆಮದಿಗೆ, ವಿಪರೀತ ಹಣ ಖರ್ಚಾಯಿತು. ಇನ್ನೂ
ಇತರೆ ಕಾರಣಗಳು ಸೇರಿ ಭಾರತದ ವಿದೇಶಿ ವಿನಿಮಯ 1991, ಜನವರಿಯಲ್ಲಿ 1.2 ಬಿಲಿಯನ್‌ ಡಾಲರ್‌ಗೆ ಕುಸಿದಿತ್ತು. ಜೂನ್‌ ತಿಂಗಳಷ್ಟೊತ್ತಿಗೆ
ಕೇವಲ ಮೂರು ವಾರಗಳ ಆಮದಿಗೆ ಮಾತ್ರ ಹಣವಿತ್ತು. ಆಗ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಅವರು, 67 ಟನ್‌ ಚಿನ್ನವನ್ನು ಇಂಗ್ಲೆಂಡ್‌ ಮತ್ತು
ಸ್ವಿಜರ್ಲೆಂಡ್‌ ಬ್ಯಾಂಕ್‌ಗಳಲ್ಲಿ ಅಡವಿಟ್ಟು, 600 ಮಿಲಿಯನ್‌ ಡಾಲರ್‌ ಹಣವನ್ನು ಸಾಲ ತಂದಿದ್ದರು.

Advertisement

ಏರಿಕೆಗೆ ಕಾರಣ?
1 ನೇರ ವಿದೇಶಿ ಹೂಡಿಕೆ (ಎಫ್ಡಿಐ) ಭಾರೀ ಪ್ರಮಾಣದಲ್ಲಿ ಏರಿದೆ. ಹಲವು ವಿದೇಶಿ ಕಂಪನಿಗಳು ಭಾರತೀಯ ಕಂಪನಿಗಳಲ್ಲಿ ಷೇರು ಖರೀದಿಸಿದ್ದಾರೆ. ಮಾರ್ಚ್‌ನಲ್ಲಿ ಎಫ್ಡಿಐ 30,398 ಕೋ.ರೂ., ಏಪ್ರಿಲ್‌ನಲ್ಲಿ 15,959 ಕೋಟಿ ರೂ. ಹರಿವು ದಾಖಲಾಗಿದೆ.

2 ಮಾರ್ಚ್‌ನಲ್ಲಿ 60,000 ಕೋಟಿ ರೂ. ಎಫ್ಪಿಐಯನ್ನು (ಫಾರಿನ್‌ ಪೋರ್ಟ್‌ಫೋಲಿಯೊ ಇನ್ವೆಸ್ಟ್‌ಮೆಂಟ್‌) ವಿದೇಶಿ ಕಂಪನಿಗಳು ಹಿಂತೆಗೆದುಕೊಂಡಿದ್ದವು.
ಈ ಪರಿಸ್ಥಿತಿ ದಿಢೀರ್‌ ಬದಲಾಗಿ, ಜೂನ್‌ ಮೊದಲನೇ ವಾರದಲ್ಲೇ 20,896 ಕೋಟಿ ರೂ. ಬಂಡವಾಳ ಬಂದಿದೆ.

3 ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ವಿದೇಶಿ ಕಂಪನಿಗಳು ಲಕ್ಷ ಕೋ.ರೂ.ಗೂ ಅಧಿಕ ಬಂಡವಾಳ ಹರಿಸಿದ್ದು.

4 ಕೋವಿಡ್ ಪರಿಣಾಮ ತೈಲದ ಆಮದು ಇಳಿಕೆಯಾಗಿದೆ, ವಿದೇಶಯಾನ ತಗ್ಗಿದೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಡಾಲರ್‌ ಹೊರಹರಿವು ನಿಂತಿದೆ.

5 ಕಳೆದವರ್ಷ ಸೆ.20ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ವಾಣಿಜ್ಯ ತೆರಿಗೆ ಕಡಿತಗೊಳಿಸಿದರು. ಅಲ್ಲಿಂದ ವಿದೇಶಿ ವಿನಿಮಯ ಸಂಗ್ರಹ 5.546 ಲಕ್ಷ ಕೋಟಿ ರೂ. ಏರಿದೆ.

ಏನು ಲಾಭ?
1 ಗರಿಷ್ಠ ವಿದೇಶಿ ವಿನಿಮಯ ಸಂಗ್ರಹದಿಂದ ಸರ್ಕಾರ ಮತ್ತು ಆರ್‌ಬಿಐಗೆ ಎಂತಹ ಬಿಕ್ಕಟ್ಟಿನಲ್ಲೂ ಪರಿಸ್ಥಿತಿ ನಿಭಾಯಿಸಬಲ್ಲ ಆತ್ಮವಿಶ್ವಾಸವಿರುತ್ತದೆ. ದೇಶದೊಳಗೆ ಮತ್ತು ಹೊರಕ್ಕೆ ಬೇಕಾದ ಹಣ ಪೂರೈಸಲು ಸಾಧ್ಯವಾಗುತ್ತದೆ.

2 ದೇಶದ ಹಣಕಾಸು ನೀತಿಯ ಮೇಲೆ ವಿಶ್ವಾಸ ಉಳಿಸಲು, ವಿದೇಶಿ ವಿನಿಮಯದರವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಅಗತ್ಯ ಬಿದ್ದಾಗ ರೂಪಾಯಿ ಮೌಲ್ಯ ಏರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಆರ್ಥಿಕ ಕುಸಿತದ ವೇಳೆ ವಿದೇಶಿ ಕರೆನ್ಸಿಗಳು ಭಾರತದ ಮೇಲೆ ಹತೋಟಿ ಸಾಧಿಸುವುದನ್ನು ತಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next