ಕುಮಟಾ: ಮನುಷ್ಯನ ರೂಪದಲ್ಲಿ ವಿವಿಧತೆ ಇದ್ದಂತೆ ಹವ್ಯಾಸಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ತಾಲೂಕಿನ ಕಲ್ಲಬ್ಬೆ ಗ್ರಾಮದ ಸುಶಿಕ್ಷಿತ ಕೃಷಿಕ ಚಿದಾನಂದ ಗಣಪತಿ ಹೆಗಡೆ. ಇವರಲ್ಲಿ ಪುರಾತನ ಕಾಲದಿಂದ ಹಿಡಿದು ಈಗಿನವರೆಗಿನ ನಾಣ್ಯಗಳು, ಅಂಚೆ ಚೀಟಿಗಳ ಜೊತೆಗೆ ಅಪರೂಪದ ಹಲವು ವಸ್ತುಗಳ ದೊಡ್ಡ ಸಂಗ್ರಹಾಲಯವೇ ಇದೆ.
ಕಲ್ಲಬ್ಬೆಯ ಸಿ.ಜಿ. ಹೆಗಡೆ ಕಳೆದ 35 ವರ್ಷಗಳಿಂದ ಇಂತಹ ಸಂಗ್ರಹದಲ್ಲಿ ನಿರತರಾಗಿದ್ದು, ಎಲ್ಲಿಯೂ ಕಾಣಸಿಗದ ಅಪರೂಪದ ನಾಣ್ಯಗಳು ಹಾಗೂ ಅಂಚೆ ಚೀಟಿಗಳ ಜೊತೆಗೆ ಪುರಾತನ ಕಾಲದ ಗಾಂಧಿ ಕನ್ನಡಕ, ಹಿಟ್ಲರ್ ಕಾಲದ ಪೆನ್ನು, ಟಿಪ್ಪು ಸುಲ್ತಾನ ಕಾಲದ ಪೆಟ್ಟಿಗೆ, ಉಂಗುರ ಗಡಿಯಾರ, ಗಾಂಧಿ ಕಾಲದ ಗಡಿಯಾರ, ಹಾಂಕಾಂಗ್ ಬ್ಯಾಟರಿ, ಮೂರು ಅಡಕೆ, ಅತಿ ಚಿಕ್ಕ ತೆಂಗಿನ ಕಾಯಿ, ಜೋಡು ಗೇರು ಬೀಜ ಹೀಗೆ ಅಪರೂಪದ ವಸ್ತುಗಳ ಭಂಡಾರವೇ ಇದೆ.
ನಾಣ್ಯ ಹಾಗೂ ಅಂಚೆ ಚೀಟಿಗಳ ಸಂಗ್ರಹಕ್ಕಾಗಿ ಚಿದಾನಂದ ಹೆಗಡೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಅಲ್ಲದೆ ಅವುಗಳನ್ನು ಜೋಪಾನವಾಗಿ ರಕ್ಷಿಸಿದ್ದಾರೆ. ಮುಂಬೈನ ಭಾರತೀಯ ಠಂಕ ಶಾಲೆಯಲ್ಲಿ ಹೆಸರು ನೋಂದಾಯಿಸಿ, ಸರ್ಕಾರ ಗಣ್ಯ ವ್ಯಕ್ತಿಗಳ ಗೌರವಾರ್ಥವಾಗಿ ಬಿಡುಗಡೆ ಮಾಡುವ ಹೊಸ ನಾಣ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಆ ನಾಣ್ಯಗಳ ಮೌಲ್ಯವನ್ನು ಸರ್ಕಾರಕ್ಕೆ ಪಾವತಿಸಿ ತರಿಸಿಕೊಳ್ಳುತ್ತಾರೆ.
ಚಿದಾನಂದ ಅವರಲ್ಲಿ ಸುಮಾರು ಏಳು ನೂರಕ್ಕು ಅಧಿಕ ದೇಶಿ ಹಾಗೂ ಆರು ನೂರಕ್ಕು ಹೆಚ್ಚು ವಿದೇಶಿ ನಾಣ್ಯಗಳಿವೆ. ಆನೆಗುಂದಿ ಅರಸರು, ಚೋಳರ ಕಾಲದ ಬಂಗಾರದ ನಾಣ್ಯಗಳ ಜೊತೆ ವಿಜಯನಗರ ಸಾಮ್ರಾಜ್ಯ, ಚಿತ್ರಕೂಟ, ಉದಯಪುರ, ಗಂಗರ ಹಾಗೂ ಬ್ರಿಟಿಷರ ಕಾಲದ ಪುರಾತನ ನಾಣ್ಯಗಳಿವೆ. ಬೆಳ್ಳಿ, ತಾಮ್ರ, ಅಲ್ಯೂಮಿನಿಯಂ ಹಾಗೂ ಈಗಿನ ಸ್ಟೀಲ್ ನಾಣ್ಯಗಳಿವೆ. ಭಾರತದ ಸ್ವತಂತ್ರ್ಯದ ನೆನಪಿಗೆ ಬಿಡುಗಡೆಯಾದ ಎಲಿಜಬೆತ್ ರಾಣಿಯ ಮುಖವಿರುವ ನಾಣ್ಯ, ಅಮೆರಿಕಾದ ಹಳೆಯ ಡಾಲರ್ ನಾಣ್ಯ, ಪೂರ್ವ ಆಫ್ರಿಕಾದ ಹಿತ್ತಾಳೆ ನಾಣ್ಯ, ಪೋರ್ಚುಗೀಸ್ ಕಾಲದ ಕೋರಿಪಾಂಚ್ ನಾಣ್ಯ ಹೀಗೆ ವಿವಿಧ ರಾಷ್ಟ್ರಗಳ ನಾಣ್ಯಗಳಿವೆ. ಅಲ್ಲದೇ ನಾಣ್ಯದ ಜೊತೆಗೆ ನೋಟುಗಳು ಕೂಡ ಇವೆ. ದೇಶಿಯ ರೂಪಾಯಿ ನೋಟುಗಳ ಜೊತೆಗೆ ಸುಮಾರು 20 ದೇಶಗಳ ಕರೆನ್ಸಿಗಳಿವೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ನಾಣ್ಯ ಹಾಗೂ ಅಂಚೆ ಚೀಟಿಗಳನ್ನು ಪ್ರದರ್ಶಿಸಿ ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಹಲವು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಅವರ ಸಂಗ್ರಹದಲ್ಲಿರುವ ಕೆಲ ನಾಣ್ಯಗಳನ್ನು ತಮಗೆ ನೀಡುವಂತೆ ವೀಕ್ಷಕರು ಒತ್ತಾಯಿಸಿದ್ದುಂಟು. ನಿರಾಕರಿಸಿದ್ದಕ್ಕೆ ಚಿದಾನಂದ ಅವರನ್ನು ಬೆದರಿಸಿದ ಘಟನೆ ಕೂಡ ನಡೆದಿದೆ ಎಂದು ಅವರೇ ಹೇಳುತ್ತಾರೆ. ಹಾಗಾಗಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂಗ್ರಹಕ್ಕೆ ಭದ್ರತೆ ಕಲ್ಪಿಸುವ ಭರವಸೆ ನೀಡಿದರೆ ಮಾತ್ರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ.
ಹಳೆಯ ನಾಣ್ಯ ಸೇರಿದಂತೆ ಹಲವು ವಸ್ತುಗಳನ್ನು ನಾನು ಹಲವು ವರ್ಷಗಳಿಂದ ಸಂಗ್ರಹಿಸುತ್ತಿದ್ದೇನೆ. ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಿಂದಲೂ ಡಾಲರ್ ಮತ್ತು ನಾಣ್ಯಗಳನ್ನು ಆಮದು ಮಾಡಿಕೊಂಡಿದ್ದೇನೆ. ಈ ಬಗ್ಗೆ ನಾನು 60ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ್ದೇನೆ. ರಾಜ್ಯ, ಹೊರ ರಾಜ್ಯಗಳಿಂದ ಬಹಳಷ್ಟು ಜನರು ನಮ್ಮಲ್ಲಿಗೆ ಬಂದು, ಈ ಬಗ್ಗೆ ವಿವರಣೆ ಪಡೆದು ಹೋಗುತ್ತಾರೆ. ಪುರಾತನ ವಸ್ತುಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸ.
•ಸಿ.ಜಿ.ಹೆಗಡೆ, ಕೃಷಿಕ