Advertisement
ತೀರ್ಥಹಳ್ಳಿ ತಾಲೂಕಿನ ಬಸವಾನಿ ಸಮೀಪದ ಅಂಡೆಕುಳಿ ಮಂಜಯ್ಯ (1902-36) ಮುಂಚೂಣಿ ಜವುಳಿ ವ್ಯಾಪಾರಸ್ಥರು, ಭೂಮಾಲಕರು. ಎಂತಹ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡುವುದು ಇವರ ಹುಟ್ಟುಗುಣ. ಊರಿನವರಿಗೆ ಧಾರಾಳವಾಗಿ ಸಾಲರೂಪದಲ್ಲಿ ದಿನಸಿ, ಬಟ್ಟೆಗಳನ್ನು ಒದಗಿಸಿ ಜನಾನುರಾಗಿಯೂ ಆಗಿದ್ದರು.
Related Articles
Advertisement
ಸ್ವಾತಂತ್ರ್ಯ ಹೋರಾಟಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ ಎಂಬ ಕರೆ ಪತ್ರಿಕೆಯೊಂದರಲ್ಲಿ ಬಂದಾಗ ಮಂಜಯ್ಯ ಹರ್ಡೇಕರ್ ಮಂಜಪ್ಪನವರ ಗರೋಡಿಯಲ್ಲಿ ತರಬೇತಿ ಪಡೆದರು. ಊರಿಗೆ ಬಂದು ಮೂರೂವರೆ ಎಕ್ರೆ ಜಮೀನಿನಲ್ಲಿ ಸಾಬರಮತಿ ಆಶ್ರಮದ ಮಾದರಿಯಲ್ಲಿ ಆಶ್ರಮ ನಿರ್ಮಿಸಿ ಸ್ವಯಂಸೇವಕರಿಗೆ ಆಶ್ರಯ ನೀಡಿದರು. ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಾಗ ಮೊದಲ ಬಾರಿ ಆರು ತಿಂಗಳು ಜೈಲುವಾಸ ಅನುಭವಿಸಿದರು. ವಾಪಸು ಬರುವಾಗ ಆಶ್ರಮವೆಲ್ಲ ಅಸ್ತವ್ಯಸ್ತವಾಗಿ ಸಾಲ ಏರಿತ್ತು. ಮನೆಯ ಗಿಂಡಿಯಲ್ಲಿದ್ದ ಪುಡಿಕಾಸೂ ಖಾಲಿಯಾಗಿತ್ತು. ತಾಯಿ “ಮನೆ ಕಡೆ ಗಮನ ಕೊಡು’ ಎಂದಾಗ “ದೇಶವೇ ಹೊತ್ತಿ ಉರಿಯುವಾಗ ನಮ್ಮ ಮನೆ ಏನು ಲೆಕ್ಕ?’ ಎಂದವರು ಮಂಜಯ್ಯ. ಹಲವು ಬಾರಿ ಜೈಲಿಗೆ ಹೋಗಿ ಬಂದಾಗ ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು. ಕರನಿರಾಕರಣೆ ಚಳವಳಿಯಲ್ಲಿ ಪೊಲೀಸರು ಬೆಂಬತ್ತಿದಾಗ ಗಡ್ಡಬಿಟ್ಟು, ಖಾದಿಯ ಕಾವಿ ಬಟ್ಟೆ ತೊಟ್ಟು ಸನ್ಯಾಸಿ ವೇಷದಲ್ಲಿ ಊರೂರು ತಿರುಗಿ ಜನರನ್ನು ಎಚ್ಚರಿಸಿದರು. ಸ್ವಯಂಸೇವಕರಲ್ಲೇ ಒಬ್ಬನ ಇಬ್ಬಗೆ ನೀತಿಯಿಂದ ಜೈಲು ಸೇರುವಂತಾಯಿತು. ಈ ಬಾರಿಯ ಜೈಲು ಕಣ್ಣೂರಿನಲ್ಲಿ. ಅಲ್ಲಿನ ಕೆಟ್ಟ ಊಟ, ಹವಾಮಾನದಿಂದ ಆರೋಗ್ಯ ಹದಗೆಟ್ಟು ಕ್ಷಯರೋಗ ಅಂಟಿತು. ಜೈಲಿನಿಂದ ಬಿಡುಗಡೆಯಾಗಿ ಬಂದರೂ 1936ರಲ್ಲಿ ಎಳೆ ವಯಸ್ಸಿನಲ್ಲಿಯೇ ಕೊನೆಯುಸಿರೆಳೆದರು. ಅದೇ ದಿನ ಅವರ ಕೊನೆಯ ಮಗಳು ವಿಶಾಲಾಕ್ಷಿ ಜನಿಸಿದ್ದು ತಿಳಿಯದೆ ಹೋಯಿತು.
ಮಕ್ಕಳ ಹೆಸರಿಗೆ “ದಾಸ’ ಸೇರ್ಪಡೆಮಂಜಯ್ಯ ಎಷ್ಟರಮಟ್ಟಿಗೆ ಗಾಂಧೀ ಅನುಯಾಯಿ ಅಂದರೆ ಮಕ್ಕಳಿಗೆಲ್ಲ ದಾಸ (ಮೋಹನದಾಸರ ಪ್ರತೀಕ) ಎಂದು ಹೆಸರಿಟ್ಟರು. ರಾಮದಾಸ, ದೇವಿದಾಸ, ಚಂದ್ರದಾಸ, ಕೃಷ್ಣ ದಾಸ, ಹಿರಿಯಣ್ಣದಾಸ, ಅನಂತದಾಸ. ಶಾರದಮ್ಮ ಮತ್ತು ವಿಶಾಲಾಕ್ಷಿ ಇಬ್ಬರು ಹೆಣ್ಣು ಮಕ್ಕಳು. ಈಗ ಇರುವುದು ವಿಶಾಲಾಕ್ಷಿ ಮಾತ್ರ. ಅವರಿಗೆ 86 ವರ್ಷ. ಮಂಜಯ್ಯ ನಿಧನ ಹೊಂದುವಾಗ ಹಿರಿಯ ಮಗ ರಾಮದಾಸನಿಗೆ 13 ವರ್ಷ. ಈ ಮಗನೂ, ತಮ್ಮ ದೇವಿದಾಸನೂ ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಮನೆಯ ಮಹಿಳೆಯರೂ ಕಸ್ತೂರ್ಬಾ ಗಾಂಧಿ ಮಾದರಿಯಲ್ಲಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ದುಡಿದರು. ಮಂಜಯ್ಯನವರ ತ್ಯಾಗದ ಇನ್ನೊಂದು ಪರಿಣಾಮವೆಂದರೆ ಸಾಯುವಾಗ ಬಿಡಿಕಾಸೂ ಇರಲಿಲ್ಲ. ಪಕ್ಕದ ಊರಿನ ಬಂಧುಗಳು ಹಣ ಸಂಗ್ರಹಿಸಿ ವೈಕುಂಠ ಸಮಾರಾಧನೆ ನಡೆಸಿದರು. ಮಂಜಯ್ಯನವರ ಚಿತ್ರ ಕೂಡ ಮನೆಯಲ್ಲಿರಲಿಲ್ಲ. ಈಗಲೂ ಅಲಭ್ಯ. “ನಮ್ಮ ಅಜ್ಜನ ಮನೆಯಲ್ಲಿ ಗಾಂಧೀಜಿ, ಮೈಸೂರು ರಾಜ ಒಡೆಯರ್ ರಂತಹವರ ಫೋಟೋ ಇತ್ತೇ ವಿನಾ ನಮಗೆ ಅಜ್ಜನ ಫೋಟೋ ಸಿಗಲೇ ಇಲ್ಲ’ ಎನ್ನುತ್ತಾರೆ ವಿಶಾಲಾಕ್ಷಿಯವರ ಮಗ, ಪ್ರಸ್ತುತ ಉಜಿರೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್. ಮಂಜುನಾಥ್. ಈಗ ಇವರ ಜತೆ ವಿಶಾಲಾಕ್ಷಿ ಇದ್ದಾರೆ. ಕಾರ್ನಾಡು ನೆನಪು
ಮಂಜಯ್ಯನವರ ಬದುಕಿನ ಕೊನೆಯನ್ನು ಯೋಚಿಸಿದಾಗ, ಕರಾವಳಿಯ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರ ನೆನಪಾಗುತ್ತದೆ. ಆಗರ್ಭ ಶ್ರೀಮಂತರಾಗಿದ್ದ ಸದಾಶಿವ ರಾಯರು ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲವನ್ನು ಕಳೆದುಕೊಂಡು “ಲೋ ಶಿವರಾಮ ಒಂದ್ 20 ರೂ. ಕೊಡೋ’ ಎಂದು ಮೂಲ್ಕಿ ಬಸ್ ನಿಲ್ದಾಣದಲ್ಲಿ ಯುವ ಸಾಹಿತಿಯಾಗಿದ್ದ ಕೋಟ ಶಿವರಾಮ ಕಾರಂತರ ಬಳಿ ಹೇಳಿದ್ದನ್ನು ಕಾರಂತರು ದಾಖಲಿಸಿದ್ದಾರೆ. ಇಂತಹವರ ತ್ಯಾಗ ವ್ಯರ್ಥವಾಗಲಿಲ್ಲ ನಿಜ- ಅದರ ಫಲ ಸಮಾಜ, ರಾಷ್ಟ್ರಕ್ಕೆ ಸಿಕ್ಕಿದೆ ಎನ್ನಬಹುದು. ಆದರೆ ಯಾರಿಗೆ ಸಿಕ್ಕಿದೆಯೋ ಅವರಿಗೆ ತ್ಯಾಗಿಗಳ ಕುರಿತು ಕೃತಜ್ಞತೆ ಇದೆಯೋ? ಇದ್ದಿದ್ದರೆ ಅನಂತರದ ಕಾಲಘಟ್ಟಗಳಲ್ಲಿ ಕಂಡುಬಂದ ವಿದ್ಯಮಾನ ಘಟಿಸುತ್ತಿತ್ತೆ? ಆಗೇನು? ಈಗೇನು?
ಮಂಜಯ್ಯನಂತಹವರು ವಿದೇಶಿ ಬಟ್ಟೆಗಳನ್ನು ಸುಟ್ಟು ಸ್ವದೇಶಿವ್ರತಧಾರಿಗಳಾದರು. ಆಗ ಬ್ರಿಟಿಷರನ್ನು ಹೊರಗಟ್ಟಬೇಕೆಂದು ಲಕ್ಷಾಂತರ ಜನರು ಪಣ ತೊಟ್ಟರು. ಈಗೇನು? ಸ್ವಾತಂತ್ರ್ಯ ಗಳಿಸಿ ಕೇವಲ 75 ವರ್ಷಗಳಲ್ಲಿ ಅವರ ವಾರಸುದಾರರು ವಿದೇಶಿ ಬಟ್ಟೆ ಧರಿಸು ವುದರಲ್ಲಿ, ವಿದೇಶೀ ಸಂಸ್ಕೃತಿಯನ್ನು ಅನುಕರಿಸುವುದರಲ್ಲಿ, ವಿದೇಶಗಳಿಗೆ ಹೋಗಿ ಸೇವೆ ಸಲ್ಲಿಸುವುದರಲ್ಲಿ, ಜಾತೀಯ (ದುರ್)ಅಭಿಮಾನವಿದ್ದರೂ ಸಂಸ್ಕೃತಿಯ ವಿಸ್ಮತಿಯಿಂದ ನೆಂಟಸ್ತಿಕೆಯಲ್ಲೂ ದೇಶವಾಸಿಗಳಿಗಿಂತ ವಿದೇಶವಾಸಿಗಳಿಗೆ ಮನ್ನಣೆ ಕಾಣುತ್ತಿದೆ. -ಮಟಪಾಡಿ ಕುಮಾರಸ್ವಾಮಿ