Advertisement

ನೆರೆ ಬರುವ ಮುನ್ನವೇ ಸಿಗುತ್ತೆ ಮುನ್ಸೂಚನೆ!

03:45 AM Apr 23, 2017 | |

ಬೆಂಗಳೂರು: ಮಳೆ ಮುನ್ಸೂಚನೆ ಮಾತ್ರವಲ್ಲ, ಇನ್ನು ಮುಂದೆ ನಗರದಲ್ಲಿ  ಮಳೆಯಿಂದ ಉಂಟಾಗುವ ದಿಢೀರ್‌ ನೆರೆ ಬಗ್ಗೆಯೂ ಮುಂಚಿತವಾಗಿಯೇ ಮಾಹಿತಿ ಸಿಗಲಿದೆ.

Advertisement

ದಿಢೀರ್‌ ನೆರೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನಗರದಲ್ಲಿನ ಮಳೆ ನೀರುಗಾಲುವೆಗಳಲ್ಲಿಯೇ ಸೆನ್ಸರ್‌ ಆಧಾರಿತ ನೆರೆ ಮುನ್ಸೂಚನ ಯಂತ್ರಗಳನ್ನು ಅಳವಡಿಸುತ್ತಿದೆ.

ಈ ನೂತನ ಸೆನ್ಸರ್‌ ಆಧಾರಿತ ಯಂತ್ರಗಳ ಅಳವಡಿಕೆಯಿಂದ ಕನಿಷ್ಠ 15 ನಿಮಿಷ ಮುಂಚಿತ ವಾಗಿಯೇ ಬಿಬಿಎಂಪಿ ಆಯುಕ್ತರು, ಪೊಲೀಸ್‌ ಅಧಿಕಾರಿಗಳು ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ಸೂಚನೆ ಹೋಗುತ್ತದೆ. ಇದರಿಂದ ಆಗಬಹು ದಾದ ಹಾನಿಯನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಬಹುದು. ಜತೆಗೆ ಆ ಪ್ರದೇಶಗಳಲ್ಲಿರುವ ನೀರುಗಾಲುವೆಗಳನ್ನು ಮರುವಿನ್ಯಾಸಗೊಳಿಸಿ ನೆರೆ ಯನ್ನು ಶಾಶ್ವತವಾಗಿ ತಡೆಗಟ್ಟಬಹುದು ಎಂದು ಕೆಎಸ್‌ಎನ್‌ಡಿಎಂಸಿ ಪ್ರಾಜೆಕ್ಟ್ ವಿಜ್ಞಾನಿ (ಜಲವಿಜ್ಞಾನ ವಿಭಾಗ) ಶುಭಾ ಅವಿನಾಶ್‌ ತಿಳಿಸಿದ್ದಾರೆ.

ಕೆಎಸ್‌ಎನ್‌ಡಿಎಂಸಿ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಹವಾಮಾನ ಮಾಹಿತಿ ಸಂವಹನ – ಮಾಧ್ಯಮದ ಪಾತ್ರ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ನಗರದ ಗೊಟ್ಟಿಗೆರೆ, ಹುಳಿಮಾವು, ಮಡಿವಾಳ ಮತ್ತು ಅರಕೆರೆಯ ಕೆರೆಗಳಿಗೆ ಕೂಡುವ ಮಳೆ ನೀರುಗಾಲುವೆಗಳಲ್ಲಿ 6 ಸೆನ್ಸರ್‌ ಆಧಾರಿತ ನೀರಿನಮಟ್ಟ ಅಳೆಯುವ ಮಾಪನಗಳನ್ನು ಅಳವಡಿಸಲಾಗಿದೆ. ಇದರ ಮಾಹಿತಿ ಸ್ವೀಕೃತಿ ಯಂತ್ರಗಳನ್ನು ಹತ್ತಿರದ ಕಟ್ಟಡದಲ್ಲಿ ಅಳವಡಿಸಲಾಗುವುದು ಎಂದರು. 

ಮಳೆ ನೀರುಗಾಲುವೆಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿ ದ್ದಂತೆ ತತ್‌ಕ್ಷಣ ರಿಸೀವರ್‌ಗೆ ರವಾನೆಯಾಗುತ್ತದೆ. ಅಲ್ಲಿಂದ ಕೆಎಸ್‌ಎನ್‌ಡಿಎಂಸಿಗೆ ಹೋಗುತ್ತದೆ. ಆ ಮೂಲಕ ಉಳಿದೆಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಹೋಗುತ್ತದೆ. ಇವೆಲ್ಲವೂ ಕೆಲವೇ ಸೆಕೆಂಡುಗಳಲ್ಲಿ ಆಗುತ್ತದೆ. 15 ನಿಮಿಷಗಳಲ್ಲಿ ಈ ಮುನ್ಸೂಚನೆ ದೊರೆಯುತ್ತದೆ ಎಂದು ಹೇಳಿದರು.

Advertisement

ಪ್ರತ್ಯೇಕ ಮಳೆ ಮುನ್ಸೂಚನೆ  ವ್ಯವಸ್ಥೆಗೆ ಚಿಂತನೆ
ಮುಂದಿನ ವರ್ಷದಿಂದ ರಾಜ್ಯದಲ್ಲಿ ಪ್ರತ್ಯೇಕ ಮಳೆ ಮುನ್ಸೂಚನ ವ್ಯವಸ್ಥೆಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಚಿಂತನೆ ನಡೆಸಿದೆ. ಪ್ರಸ್ತುತ ಇಡೀ ದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡುತ್ತದೆ. ಆದರೆ, ಈ ಮುನ್ಸೂಚನೆಯು ಪ್ರಾದೇಶಿಕವಾರು ಇರುವುದ ರಿಂದ ನಿಖರವಾಗಿ ಮಾಹಿತಿ ಲಭ್ಯವಾಗುವುದಿಲ್ಲ ಎಂಬ ಕೊರಗು ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ವರ್ಷದ ಮುಂಗಾರು ಮಳೆಯ ಮುನ್ಸೂಚನೆಯನ್ನು ಕೆಎಸ್‌ಎನ್‌ಡಿಎಂಸಿಯೇ ನೀಡಲು ಸಿದ್ಧತೆ ನಡೆದಿದೆ ಎಂದು ಕೇಂದ್ರದ ನಿರ್ದೇಶಕ ಡಾ| ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರತ್ಯೇಕ ಮಳೆ ಮುನ್ಸೂಚನ ವಿಭಾಗ ಆರಂಭಿಸುವ ಸಂಬಂಧ ಕೇಂದ್ರ ಸರಕಾರದ ಸಿ-ಮ್ಯಾಕ್ಸ್‌  ಜತೆ ಒಡಂಬಡಿಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಕೆಎಸ್‌ಎನ್‌ಡಿಎಂಸಿಯು ಈ ಸಂಸ್ಥೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡಲಿದೆ. ಇದರಿಂದ ರಾಜ್ಯದ ಜನರಿಗೆ ಮುಂಗಾರು ಪ್ರವೇಶ‌, ಹಿಂಗಾರು ಪ್ರವೇಶ ಸಹಿತ ಸೀಜನ್‌ವಾರು ಮಳೆ ಮಾಹಿತಿ ನೀಡಲು ಸಾಧ್ಯವಾಗಲಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಮುಂದಿನ ವರ್ಷದಿಂದಲೇ ಈ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next