Advertisement

ನರೇಗಾ ಕಾರ್ಮಿಕರಿಗೆ ಬಾಕಿ ಹಣ ಪಾವತಿಗೆ ಒತ್ತಾಯ

08:47 PM Aug 04, 2022 | Team Udayavani |

ರಾಯಚೂರು: ನರೇಗಾ ಕೂಲಿ ಕಾರ್ಮಿಕರಿಗೆ ಬಾಕಿ ಹಣ ಪಾವತಿಸಬೇಕು. ಅಪ್ಲಿಕೇಶನ್‌ ಆಧಾರಿತ ಹಾಜರಾತಿ ನಿಯಮ ಜಾರಿಗೊಳಿಸಿದರೆ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ನರೇಗಾ ಸಂಘರ್ಷ ಮೊರ್ಚಾ (ನರೇಗಾ ಕಾರ್ಮಿಕರ ಸಂಘಗಳ ರಾಷ್ಟ್ರೀಯ ಜಾಲ, ಗ್ರಾಕೂಸ್‌ ಸದಸ್ಯ ಸಂಘಟನೆ) ಸದಸ್ಯರು ಹಾಗೂ ಕೂಲಿ ಕಾರ್ಮಿಕರು ಬುಧವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಉದ್ಯೋಗ ಖಾತ್ರಿ ಕಾನೂನಿನಲ್ಲಿ ಆಗಾಗ ಹೊಸ ತಂತ್ರಜ್ಞಾನ ಆಧಾರಿತ ಬದಲಾವಣೆ ಮಾಡಲಾಗುತ್ತಿದೆ. ಸಮರ್ಪಕ ಕೂಲಿ ಹಣ ಸಿಗದ ಕಾರಣ ಗ್ರಾಮೀಣ ಭಾಗದ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಆಸಕ್ತಿ ಕಡಿಮೆಯಾಗಿ ಪುನಃ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಎನ್‌ಎಂಎಂಎಸ್‌ ಮೊಬೈಲ್‌ ಆಪ್‌ ಆಧಾರದ ಇ ಹಾಜರಾತಿ ಒಳ್ಳೆಯ ಕಾರ್ಯಕ್ರಮವಾದರೂ ಬೆಳಗ್ಗೆ ಒಮ್ಮೆ ಮಾತ್ರ ಹಾಜರಾತಿ ಇರಬೇಕು. ಎರಡು ಬಾರಿ ಹಾಜರಾತಿ ಮಾಡಿರುವುದು ಸರಿಯಲ್ಲ ಎಂದರು.

ಕಾನೂನಿನನ್ವಯ ಕೆಲಸದ ಪ್ರಮಾಣದ ಆಧರಿಸಿ ಕೂಲಿ ಹಣ ನೀಡಿದರೆ ಎಂಟು ಗಂಟೆ ದುಡಿಮೆ ಇದ್ದಲ್ಲಿ ಕನಿಷ್ಠ ವೇತನ ನೀಡಬೇಕು. 2021-22ನೇ ಸಾಲಿನ ಫೆಬ್ರುವರಿ, ಮಾರ್ಚ್‌ ಹಾಗೂ 2022ರ ಏಪ್ರಿಲ್‌, ಮೇ, ಜೂನ್‌ ತಿಂಗಳ ಕೂಲಿ ಬಾಕಿ ಇದ್ದು, ಕೂಡಲೇ ಬಿಡುಗಡೆ ಮಾಡಬೇಕು. ಕಾರ್ಮಿಕರು ಕೆಲಸದ ಜಾಗದಲ್ಲಿ ತಮ್ಮದೇ ಸಾಮಗ್ರಿ (ಗುದ್ದಲಿ, ಸಲಿಕೆ) ಬಳಸಿದ್ದಲ್ಲಿ ಸಾಮಗ್ರಿ ವೆಚ್ಚ ದಿನಕ್ಕೆ 10 ನೀಡಲಾಗುತಿತ್ತು. ಕಳೆದ ಜೂನ್‌ ತಿಂಗಳಿನಿಂದ ರಾಜ್ಯ ಸರ್ಕಾರ ಇದನ್ನು ರದ್ದು ಮಾಡಿದ್ದು, ಈ ಹಣವನ್ನು 25ಕ್ಕೆ ಹೆಚ್ಚಿಸಿ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಕೂಸ್‌ ಸದಸ್ಯರಾದ ಚನ್ನಬಸವ, ಈರಣ್ಣ ತಾತ, ವಿದ್ಯಾ ಪಾಟೀಲ, ಆಂಜಿನಯ್ಯ, ಮೋಕ್ಷಮ್ಮ, ಗುಂಡಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next