ಗುರುಮಠಕಲ್: ರೈತರಿಗೆ ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದು, ಪರಿಹಾರ ಒದಗಿಸುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಶರಣಬಸವ ಮೂಲಕ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿದ್ದು, ಸರಕಾರ ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಮತ್ತು ಹೊಲಗಳಿಗೆ ಹೋಗುವ ರಸ್ತೆಗಳನ್ನು ದುರಸ್ತಿಗೊಳಿಸುವುದು ಹಾಗೂ ರೈತರಿಗೆ 12 ಗಂಟೆ ವಿದ್ಯುತ್ ಹಾಗೂ ಹಳೆಯದಾದ ಎಲ್ಲ ವಿದ್ಯುತ್ ಉಪಕರಣಗಳನ್ನು ನವೀಕರಿಸಬೇಕು. ಹೆದ್ದಾರಿಗಳ ತಗ್ಗು ಗುಂಡಿಗಳನ್ನು ಮುಚ್ಚಿ ದುರಾಸ್ತಿಗೊಳಿಸಬೇಕು. ಎಲ್ಲ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಅವುಗಳ ದುರಸ್ತಿ ಮಾಡಬೇಕು. ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರು, ಸರಕಾರದಿಂದ ರೈತರಿಗೆ ಒದಗಿಸುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಅತಿಯಾದ ಮಳೆಯಿಂದ ಸುಮಾರು ಹಳ್ಳಿಗಳಲ್ಲಿ ಮನೆಗಳು ನೆಲಸಮಗೊಂಡಿದ್ದು, ನಿರಾಶ್ರಿತರಿಗೆ ಪರಿಹಾರ ಕಲ್ಪಿಸಬೇಕು ಎಂದರು.
ಸಂಘದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ವಿ. ಪಾಟೀಲ್, ಜಿಲ್ಲಾಧ್ಯಕ್ಷ ಶರಣು ಮಂದರವಾಡ, ತಾಲೂಕು ಅಧ್ಯಕ್ಷ ಭೀಮರಾಯ ಯಲ್ಹೇರಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸೈದಾಪೋಳ, ಕಾರ್ಯದರ್ಶಿ ವಿಜಯಕುಮಾರ ತೋರಣತಿಪ್ಪ, ಕಿಸಾನ್ ಚವ್ಹಾಣ್ ಸೇರಿದಂತೆ ರೈತರು ಇದ್ದರು.