ಮುಂಬಯಿ: ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದ್ದ ಮಹಾರಾಷ್ಟ್ರದ ಮಾಜಿ ಸಚಿವ, ಶಿವಸೇನಾದ ಉಪ ನಾಯಕ ಅರ್ಜುನ್ ಖೋಟ್ಕರ್ ಬಂಡಾಯದ ಏಕನಾಥ ಶಿಂಧೆ ಗುಂಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಶನಿವಾರ (ಜುಲೈ 30) ಘೋಷಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ನಿಂದ ಅನಗತ್ಯ ರಾಜಕಾರಣ: ಪ್ರಲ್ಹಾದ ಜೋಶಿ
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಖೋಟ್ಕರ್, ಶಿವಸೇನಾ ಅಧ್ಯಕ್ಷ, ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಪಕ್ಷದ ವಕ್ತಾರ ಸಂಜಯ್ ರಾವತ್ ಅವರ ಜೊತೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
“ನನ್ನ ನಿರ್ಧಾರದ ಹಿಂದಿರುವ ಎಲ್ಲಾ ಒತ್ತಡಗಳ ಬಗ್ಗೆ ನಾನು ವಿವರಿಸಿದ್ದೇನೆ. ಅದರ ಬಗ್ಗೆ ಅವರಿಗೂ ತಿಳಿದಿದೆ. ನನ್ನ ಕುಟುಂಬ ವರ್ಗಕ್ಕೆ ಆಗುತ್ತಿರುವ ಕಿರುಕುಳ, ಮಾನಸಿಕ ಒತ್ತಡದಿಂದ ನಾನು ಬಲವಂತವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದು, ಠಾಕ್ರೆ ಮತ್ತು ರಾವತ್ ಕೂಡಾ ಅರ್ಥ ಮಾಡಿಕೊಂಡಿದ್ದಾರೆಂದು” ಖೋಟ್ಕರ್ ಜಾರಿ ನಿರ್ದೇಶನಾಲಯದ ಹೆಸರನ್ನು ಉಲ್ಲೇಖಿಸದೇ ವಿವರ ನೀಡಿರುವುದಾಗಿ ವರದಿ ತಿಳಿಸಿದೆ.
ಒಬ್ಬ ವ್ಯಕ್ತಿ ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ ಆತ ಎಲ್ಲಿಂದಾದರು ರಕ್ಷಣೆ ಪಡೆಯುತ್ತಾನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಳೆದ ಎರಡು ವರ್ಷಗಳಿಂದ ಖೋಟ್ಕರ್ ಮತ್ತು ಅವರ ಕುಟುಂಬದ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವುದರ ಕುರಿತು ಪರೋಕ್ಷವಾಗಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.