Advertisement

ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ ಒತ್ತಾಯ; ಸಿದ್ದರಾಮಯ್ಯ ಸ್ಪಷ್ಟನೆ

05:46 PM Nov 18, 2022 | Team Udayavani |

ಮೈಸೂರು: ಮುಂದಿನ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ ಒತ್ತಾಯ ಬಂದಿದೆ. ನಾನು ಮೂರು ಕ್ಷೇತ್ರಗಳನ್ನ ಶಾರ್ಟ್ ಲಿಸ್ಟ್ ಮಾಡಿದ್ದೇನೆ. ಕೋಲಾರ, ಬಾದಾಮಿ ಹಾಗೂ ವರುಣಾ ಕ್ಷೇತ್ರ ಶಾರ್ಟ್ ಲೀಸ್ಟ್‌ನಲ್ಲಿದೆ. ಚುನಾವಣೆ ಘೋಷಣೆ ನಂತರ ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಹೇಳುವೆ.ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

Advertisement

”ಪಂಚರತ್ನ ಯಾತ್ರೆ ಕುರಿತು, ಜೆಡಿಎಸ್ ಯಾವ ಯಾತ್ರೆ ಮಾಡಿದರೂ ಪರವಾಗಿಲ್ಲ. ಜೆಡಿಎಸ್ ನವರು ಅಷ್ಟ ರತ್ನ,ದಶರತ್ನ ಮಾಡಲಿ.ಅವರ ಸಂಘಟನೆ ಅವರಿಗೆ.ನಾನು ಯಾರಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ”ಎಂದರು.

ಸೋಲಿನ ಭಯದಲ್ಲಿ ಸರ್ವೆ ಮೊರೆ ಹೋಗಿದ್ದಾರೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ವೆ ಮಾಡಿಸಿದರೆ ತಪ್ಪೇನು? ನರೇಂದ್ರ ಮೋದಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ?ಹಾಗಾದ್ರೆ ಅವರು ಸರ್ವೆ ಮಾಡಿಸಿರಲಿಲ್ಲವೇ? ನಾವು ರಾಜ್ಯವ್ಯಾಪಿ ಪ್ರವಾಸ ಮಾಡುತ್ತೇವೆ. ಸುರಕ್ಷಿತ ಕ್ಷೇತ್ರಕ್ಕಾಗಿ ಸರ್ವೆ ಮಾಡಿಸಿರುತ್ತಾರೆ. ನಾನು ಸರ್ವೆ ಮಾಡಿಸಿಲ್ಲ, ಪಕ್ಷ ಸರ್ವೆ ಮಾಡಿಸಿಲ್ಲ ಎಂದರು.

ಮತದಾರ ಪಟ್ಟಿ ಪರಿಷ್ಕರಣೆ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ,ಇದು ಆಪರೇಷನ್ ಕಮಲ, ಭ್ರಷ್ಟಾಚಾರದ ಮುಂದುವರಿದ ಭಾಗ.
ಚುನಾವಣೆಯಲ್ಲಿ ಗೆಲ್ಲೋಕೆ ಏನೆಲ್ಲ ಆಟ ಆಡ್ತಾರೆ ಅನ್ನೋದಕ್ಕೆ ಇದೂ ಒಂದು ಉದಾಹರಣೆ. ಬಿಜೆಪಿಯವರೂ ಏನೂ ಬೇಕಾದರೂ ಮಾಡುತ್ತಾರೆ. ಆಪರೇಷನ್ ಕಮಲ ಹುಟ್ಟುಹಾಕಿದ್ದು ಬಿಎಸ್.ಯಡಿಯೂರಪ್ಪ ಎಂದರು.

ಮತದಾರರ ಪಟ್ಟಿ ಪರಿಷ್ಕರಿಣೆ ವೇಳೆ ಮಾಹಿತಿ ಕಳ್ಳತನ ಆಗಿದೆ. ಈ ಬಗ್ಗೆ ದೂರು ನೀಡಲಾಗಿದೆ, ನಾಳೆ ಚುನಾವಣಾ ಆಯೋಗದ ಮುಂದೆ ಧರಣಿ ಮಾಡುತ್ತೇವೆ.ಬಿಬಿಎಂಪಿ ಆಯುಕ್ತರು ಖಾಸಗಿ ಕಂಪನಿಗೆ ಇದನ್ನ ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರಿಗೆ ಗೊತ್ತಿದ್ದೇ ಆಗಿದೆ.ಚುನಾವಣಾ ಆಯೋಗ ಸ್ವೀಪ್ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇವರು ಕಾಂಪಿಟೇಟಿವ್ ಬಿಡ್ ಕರೆಯಬೇಕಿತ್ತು. ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದಿದ್ದಕ್ಕೆ ಚಿಲುಮೆ ಮತ್ತು ಹೊಂಬಾಳೆ ಕಂಪನಿಗೆ ಕೊಟ್ಟಿದ್ದಾರೆ. ಇದಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಆ ಕಂಪನಿ ಲಾಭ ಇಲ್ಲದೆ ಇದನ್ನು ಮಾಡುತ್ತದೆಯೇ ಎಂದು ಪ್ರಶ್ನಿಸಿದರು.

Advertisement

ಅಲ್ಪಸಂಖ್ಯಾತ, ದಲಿತರು, ಹಿಂದುಳಿದವರು ಕಾಂಗ್ರೆಸ್ ಪರ ಇರುತ್ತಾರೆ. ಅಂತಹ ಮತದಾರರ ಮಾಹಿತಿ ಡಿಲೀಟ್ ಮಾಡಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾವು ಆರೋಪ ಮಾಡಿದ ಮೇಲೆ ಬಿಬಿಎಂಪಿ ಆಯುಕ್ತರು ರಕ್ಷಣಾತ್ಮಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಇಲ್ಲಿ ಮಾಹಿತಿ ಕಳ್ಳತನ ಆಗಿದೆ. ಬಿಎಲ್‌ಓಗಳು ಯಾವಾಗಲೂ ಸರ್ಕಾರಿ ಅರೆ ಸರ್ಕಾರಿ ನೌಕರರಾಗಬೇಕು. ಇವರು ತಮಗೆ ಬೇಕಾದವರನ್ನು ಬಿಎಲ್‌ಓ ಮಾಡಿಕೊಂಡಿದ್ದಾರೆ. ಇದು ಕಾನೂನು ಬಾಹಿರ. ಖಾಸಗಿಯವರನ್ನ ಬಿಎಲ್‌ಒಗಳ ನೇಮಕಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಮಾಜಿ ಸಿಎಂ ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಸ್ಪರ್ಧೆ ಬೇಡ ಎಂದಿರುವ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ.ಅದನ್ನೂ ಪರಿಗಣನೆಗೆ ತೆಗೆದುಕೊಳ್ಳೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next