ಯಲ್ಲಾಪುರ: ನೂತನ ಇ-ಖಾತಾ ಸಮಸ್ಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ನಗರ ವ್ಯಾಪ್ತಿಯ ಪ್ರತಿಯೊಬ್ಬ ನಾಗರಿಕರಿಗೂ ತೀವ್ರ ತೊಂದರೆ ನೀಡುತ್ತಿರುವುದಲ್ಲದೇ, ಸರ್ಕಾರಕ್ಕೆ ಪ್ರತಿವರ್ಷ ಕೋಟ್ಯಾಂತರ ರೂ. ಹಾನಿ ಸಂಭವಿಸುವಂತಾಗಿದೆ.
ಆದರೂ ಅಧಿಕಾರಿಗಳು ಈ ಗಂಭೀರ ಸಂಗತಿ ಕುರಿತು ಗಮನ ನೀಡದಿರುವ ಹಿನ್ನೆಲೆಯಲ್ಲಿ ನಾವು ಕಳೆದ 6 ತಿಂಗಳಿಂದ ಜಿಲ್ಲಾ ಹೋರಾಟ ಸಮಿತಿ ರಚಿಸಿ, ಹೋರಾಟ ಪ್ರಾರಂಭಿಸಿದ್ದೇವೆ ಎಂದು ಜಿಲ್ಲಾ ಇ-ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಆನವಟ್ಟಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇ-ಖಾತಾ ಸಮಸ್ಯೆ ಕುರಿತು ಮಾಹಿತಿ ನೀಡುತ್ತಿದ್ದರು. ಇ-ಖಾತಾ ಸಮಸ್ಯೆ ಕುರಿತು ಶಿರಸಿಯಲ್ಲಿ ಜನಾಗ್ರಹದಂತೆ ನಾನು ಸಮಿತಿ ಅಧ್ಯಕ್ಷನಾಗಿ ಹೊಣೆ ಹೊತ್ತು, ಕಳೆದ 6 ತಿಂಗಳಿಂದ ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸರ್ಕಾರಿ ಆದೇಶ ಪಡೆದು, ಏನು ತೊಂದರೆಯಾಗುತ್ತಿದೆ? ಇದಕ್ಕೆ ಪರಿಹಾರವೇನು? ಎಂಬ ಕುರಿತು ಮನಗಂಡಿದ್ದೇನೆ. ಈ ಬಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಲ್ಲಿ ಅನೇಕ ಬಾರಿ ವಿನಂತಿಸಲಾಗಿತ್ತು.
ನಮ್ಮ ಬೇಡಿಕೆಗೆ ಸ್ಪಂದನೆ ದೊರೆಯದೇ, ತೀವ್ರ ನೋವನ್ನು ಅನುಭವಿಸುವಂತಾಗಿದೆ ಎಂದು ಅಳಲನ್ನು ತೋಡಿಕೊಂಡರು. ವಾಸ್ತವಿಕವಾಗಿ ರಾಮನಗರದಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದು, ಆ ಕುರಿತಾಗಿ ಉಪಲೋಕಾಯುಕ್ತಕ್ಕೆ ದೂರು ಹೋದಾಗ ಅವರು ಒಂದು ಆದೇಶ ಮಾಡಿದ್ದು, ಈ ಆದೇಶವೇ ಎಲ್ಲ ಗೊಂದಲಗಳಿಗೂ ಕಾರಣವಾಗಿದೆ. ಆದರೆ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳ ಅಭಿಪ್ರಾಯದಂತೆ ಸರ್ಕಾರದ ಕಾನೂನಿನ ವಿರುದ್ಧವಾಗಿ ಅಥವಾ ಬದಲಾವಣೆ ಮಾಡುವಂತೆ ಆದೇಶಿಸಲು ಉಪ ಲೋಕಾಯುಕ್ತರಿಗೆ ಅಧಿಕಾರವಿಲ್ಲ ಎಂದು ಬೆಂಗಳೂರಿನ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಮುಖ್ಯಮಂತ್ರಿಗಳು ಈ ಉಪ ಲೋಕಾಯುಕ್ತರ ಆದೇಶ ರದ್ದುಗೊಳಿಸಲು ನಿರ್ಣಯಿಸಿದರೆ, ಕೆಲವೇ ನಿಮಿಷಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂಬುದನ್ನೂ ಹಿರಿಯ ಅಧಿಕಾರಿಗಳಿಂದ ಅರಿತಿದ್ದೇವೆ. ಆದರೆ ಇಂತಹ ಪ್ರಮುಖ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ. ನಿಜವಾಗಿ ಇ-ಖಾತಾ ಬದಲಾವಣೆ ಕಾನೂನು ಅನುಷ್ಠಾನಗೊಂಡಿದ್ದು, ಕೇಂದ್ರ ಸರ್ಕಾರದ ಮಟ್ಟದಲ್ಲಿ ಅದನ್ನು ಇಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸದೇ, ಸಾರ್ವಜನಿಕರಿಗೆ ತೊಂದರೆಯಾಗಿದೆ.
ಯಾವುದೇ ವ್ಯಕ್ತಿ ತನ್ನ ಮಾಲ್ಕಿ ಜಮೀನನ್ನು ಮಾರಾಟ ಮಾಡುವಂತಿಲ್ಲ. ಖಾತಾ ಬದಲಾವಣೆ ಮಾಡುವಂತಿಲ್ಲ. ಕಟ್ಟಡ ಕಾಮಗಾರಿ ನಡೆಸಲು ತೊಂದರೆಯಾಗಿದೆ.ಇದರಿಂದ ರಾಜ್ಯದ 213 ಅರ್ಬನ್ ಡೆವಲಪ್ಮೆಂಟ್ ಗಳಲ್ಲಿ ತೊಂದರೆಯಾಗಿದೆ. ಇದರಿಂದ ಸರಾಸರಿ ಪ್ರತಿವರ್ಷ ಸರ್ಕಾರಕ್ಕೆ 6 ಸಾವಿರ ಕೋಟಿ ರೂ. ಹಾನಿಯಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಇಂತಹ ಗಂಭೀರ ವಿಷಯವನ್ನು ನಮ್ಮ ಸರ್ಕಾರ ಅಥವಾ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದಿರುವುದರಿಂದ
ಜನ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಜಿಲ್ಲೆಯೊಂದರಿಂದಲೇ ವರ್ಷಕ್ಕೆ 600 ಕೋಟಿ ರೂ. ಸರ್ಕಾರಕ್ಕೆ ತೆರಿಗೆ ಹಣ ಸಿಗುತ್ತಿಲ್ಲ. ಆದ್ದರಿಂದ ನಮ್ಮ ಹೋರಾಟ ಸಮಿತಿ ಸದಸ್ಯರು ಸಂಘಟಿತರಾಗಿ ಯಲ್ಲಾಪುರದ ನಿಕಟಪೂರ್ವ ಶಾಸಕ ಶಿವರಾಮ ಹೆಬ್ಟಾರ ಅವರನ್ನು ಭೇಟಿ ಮಾಡಿ, ಮನವರಿಕೆ ಮಾಡಿದ್ದೇವೆ. ಕೆಲವು ದಿನಗಳ ಸಮಯ ನೀಡಿದ ಅವರು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ಹೋರಾಟ ಸಮಿತಿ ಪ್ರಮುಖರಾದ ರಾಜು ಪೈ, ಅಶೋಕ ದೇಸಾಯಿ, ಚಂದ್ರಶೇಕರ ಹೆಗಡೆ, ಪ್ರಕಾಶ ಸಾಲೇರ, ದೇವರಾಜ, ನಟರಾಜ ಮತ್ತಿತರರಿದ್ದರು.