ಆಳಂದ: ಪಟ್ಟಣದಲ್ಲಿ ಜಿಲ್ಲಾಡಳಿತ ವಿಧಿಸಿದ್ದ 144ನೇ ಕಲಂ ನಿಷೇಧಾಜ್ಞೆ ಉಲ್ಲಂಘಸಿದ ಜನ ಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ಕೆ. ನೀಲಾ ಒತ್ತಾಯಿಸಿದರು.
ಪಟ್ಟಣದಲ್ಲಿ ಮಾರ್ಚ್ 1ರಂದು ನಡೆದ ಘಟನೆ ಹಿನ್ನೆಲೆಯಲ್ಲಿ ಶಾಂತಿ-ಸೌಹಾರ್ದತೆ ಕಾಪಾಡುವಂತೆ ಗುರುವಾರ ಜಿಲ್ಲಾ ಸಿಪಿಐ ಮತ್ತು ಸಿಪಿಐಎಂ ಪಕ್ಷಗಳು ಜಂಟಿಯಾಗಿ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು ಹಾಗೂ ಜನ ಪ್ರತಿನಿಧಿಗಳು ಕಾನೂನು ಪಾಲಿಸಬೇಕಾದವರೆ ನಿಷೇಧಾಜ್ಞೆ ಉಲ್ಲಂಘಿಸಿ ಎರಡ್ಮೂರು ಗಂಟೆ ಕಾಲ ರಸ್ತೆ ಮೇಲೆ ಟೆಂಟ್ ಹಾಕಿ ಕುಳಿತಿದ್ದರು. ಬ್ಯಾನ್ ಮಾಡಿದ್ದ “ಬನಾಯೆಂಗೇ ಮಂದಿರ’ ಹಾಡು ಹಾಕಿ ಕುಣಿದಿದ್ದರು. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ಶಾಸಕರ ಮನೆಯಿಂದಲೇ ಬರುವ ಮೆರವಣಿಗೆ ತಡೆಯಬೇಕಾಗಿತ್ತು. ಆದರೆ ಜಿಲ್ಲಾಡಳಿತ ಕಾನೂನು ಪರಿಪಾಲನೆಯ ಕಠಿಣ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಕನಿಷ್ಟ ವಾರದ ಸಂತೆಯೂ ನಡೆದಿಲ್ಲ. ಇದರಿಂದ ಸುಮಾರು 10 ಕೋಟಿ ರೂ.ಗಿಂತಲೂ ಹೆಚ್ಚು ನಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಪಿಐ ರಾಜ್ಯ ಕಾರ್ಯಕಾರಣಿ ಮಂಡಳಿ ಸದಸ್ಯ ಮೌಲಾ ಮುಲ್ಲಾ ಮಾತನಾಡಿ, ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಎಂಟು ದಿನಗಳಿಂದಲೂ ಸಾವಿರಕ್ಕೂ ಹೆಚ್ಚು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಇಂತಹ ಘಟನೆ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಪಾಂಡುರಂಗ ಮಾವೀನಕರ್, ಸಿಪಿಐ ಭೀಮಾಶಂಕರ ಮಾಡಿಯಾಳ ಮತ್ತಿತರರು ಇದ್ದರು.