ಯಾದಗಿರಿ: ಡಾ| ಬಿ.ಆರ್. ಅಂಬೇಡ್ಕರ್ ಆವಾಸ ಯೋಜನೆಯಡಿ ಮನೆ ನಿರ್ಮಾಣಕ್ಕೆ ನಿವೇಶನ ಮಂಜೂರಿಗೆ ಸರಕಾರದ ಸ್ಪಷ್ಟ ನಿರ್ದೇಶನ ಇದ್ದರೂ ನಿರ್ಲಕ್ಷ್ಯ ತೋರುತ್ತಿರುವ ಜಿಪಂ ಆಡಳಿತದ ಧೋರಣೆ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ ನಡೆಸುತ್ತಿರುವ ಧರಣಿ ಸೋಮವಾರ 5ನೇ ದಿನಕ್ಕೆ ಕಾಲಿರಿಸಿತು.
ಬೆಳಗ್ಗೆ ಧರಣಿ ಸ್ಥಳಕ್ಕೆ ಜಿಪಂ ಸಿಇಒ ಡಾ| ಅವಿನಾಶ ಮೆನನ್ ರಾಜೇಂದ್ರನ್ ಆಗಮಿಸಿ, 15 ದಿನದಲ್ಲಿ ಡಾ| ಅಂಬೇಡ್ಕರ್ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ನಿವೇಶನ ಮಂಜೂರಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಸತ್ಯಾಗ್ರಹ ಹಿಂಪಡೆದುಕೊಳ್ಳುತ್ತಿರುವುದಾಗಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ತಿಳಿಸಿದರು.
ಇದಕ್ಕೂ ಮುನ್ನ ಅನಿರ್ದಿಷ್ಟ ಧರಣಿ ನಿರತ ಕಾರ್ಯಕರ್ತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಆಮಿತಿ ನಿವೇಶನಗಳನ್ನು ಮಂಜೂರು ಮಾಡಲು ಗ್ರಾಪಂ ನಡುವಳಿಕೆ ಪಾಸ್ ಮಾಡಲು ಒತ್ತಾಯಿಸಿದರು.
ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಎಲ್ಲ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ವಿತರಣೆ ಮಾಡಬೇಕೆಂಬ ನಿಯಮ ಇದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಜಿಪಂ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸುರಪುರ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರಿ, ರಾಮಯ್ಯ ಭೋವಿ, ಚಂದ್ರಾಮ ಗೌಡ, ಸಿದ್ದಲಿಂಗಯ್ಯ
ವಗ್ಗಾ, ಶಿವರಾಜ ದೊರಿ, ತಂಗಮ್ಮ, ಹಣಮಂತಿ, ಚೆನ್ನಮ್ಮ, ಶಿವಕಾಂತಮ್ಮ, ಯಲ್ಲಮ್ಮ ಇದ್ದರು.