Advertisement

ಕನ್ನಡ ಶಾಸ್ತ್ರೀಯ ಭಾಷೆಯ ಸ್ವಾಯತ್ತತೆಗೆ ಒತ್ತಾಯಿಸುವೆ

12:07 PM Nov 28, 2018 | |

ಬೆಂಗಳೂರು: ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ವಾಯತ್ತತೆ ನೀಡುವಂತೆ ಮುಂದಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಹೇಳಿದ್ದಾರೆ.

Advertisement

ಕನ್ನಡ ಗೆಳೆಯರ ಬಳಗದ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಧಕರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ತಮಿಳು ಭಾಷೆಗೆ ಕೇಂದ್ರ ಸರ್ಕಾರ ಸ್ವಾಯತ್ತತೆ ನೀಡಿದೆ.

ಇದರಿಂದಾಗಿ ತಮಿಳುನಾಡಿನ ಸರ್ಕಾರ ಆ ಭಾಷೆಯ ಅಭಿವೃದ್ಧಿಗೆಂದು ವಾರ್ಷಿಕ 10 ಕೋಟಿ ರೂ. ಅನುದಾನ ಪಡೆದು ಭಾಷಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಇತರೆ ರಾಜ್ಯಗಳು ಕೇವಲ ಒಂದು ಅಥವಾ ಎರಡು  ಕೋಟಿ ರೂ. ಮಾತ್ರ ಪಡೆಯುತ್ತಿವೆ. ಹಾಗಾಗಿ ನಮ್ಮ ಕನ್ನಡ ಭಾಷೆಗೆ ಸ್ವಾಯತ್ತತೆ ನೀಡುವಂತೆ ಚಳಿಗಾಲದ ಅಧಿವೇಶನದಲ್ಲಿ ಒತ್ತಾಯಿಸುತ್ತೇನೆ ಎಂದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಾಗ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರು ಎಕರೆ ಜಾಗ ನೀಡಿ ಕಟ್ಟಡ ನಿರ್ಮಿಸಲು ಅವಕಾಶ ನೀಡಿದ್ದೆವು. ಈ ಕಾರ್ಯಕ್ಕೆ ಮೈಸೂರಿನ ಕೆಲವರು ವಿರೋಧ ಮಾಡಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಆ ಕಟ್ಟಡ ನಿರ್ಮಿಸಬೇಕು ಎಂದು ಪಟ್ಟುಹಿಡಿದರು. ಇಂತಹ ಗೊಂದಲಗಳಿಂದಾಗಿ ಶಾಸ್ತ್ರೀಯ ಸ್ಥಾನಮಾನ ಸಿಕ್ಕರೂ, ಸ್ವಾಯತ್ತತೆ ಸಿಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳು ಉಳಿಯುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಕಾಯ್ದೆ ಜಾರಿ ಮಾಡಬೇಕಿದೆ. ಜತೆಗೆ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯ ಭಾಷಿಕರಿಗೆ ಹೆಚ್ಚಿನ ಆದ್ಯತೆ ನೀಡುಬೇಕಿದೆ. ಈ ಕುರಿತು ರಾಜ್ಯ ಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕು ಎಂದು ಹೇಳಿದರು.

Advertisement

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಮಾತನಾಡಿ, ಇನ್ನೊಬ್ಬರ ವಿಚಾರ, ಧರ್ಮವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಕನ್ನಡಿಗರು ಈ ವಿಚಾರದಲ್ಲಿ ಮಾದರಿಯಾಗಿದ್ದಾರೆ. ಹೀಗಾಗಿಯೇ, ಕನ್ನಡಿಗರು ಎಂದಿಗೂ, ಎಲ್ಲ ಕಡೆಯೂ ಪ್ರಸ್ತುತ ಎಂದು ಹೇಳಿದರು.

ಕನ್ನಡ ಪರ ಹೋರಾಟಗಾರ ಪಾಲನೇತ್ರ ಅವರಿಗೆ “ಕನ್ನಡ ಚಿರಂಜೀವಿ’ಪ್ರಶಸ್ತಿ ಹಾಗೂ ಕೆ.ಎಸ್‌.ನಾಗರಾಜ್‌ ಅವರಿಗೆ  “ಕನ್ನಡ ಅರವಿಂದ’ ಪ್ರಶಸ್ತಿ ನೀಡಲಾಯಿತು. ಎಂ.ಗೌಡಯ್ಯ, ಬಿ.ಎಂ.ಗಂಗಣ್ಣ, ಜಯರಾಮ ಕೆ.ಯಾದವ, ಮೊಹಮದ್‌ ಮುನಾಫ್, ಶಾಮ್‌ ಪ್ರಸಾದ್‌, ಸುರೇಶ್‌ ಕುಮಾರ್‌ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಸಾಹಿತಿ ಪ್ರೊ.ಎಂ.ಎಚ್‌.ಕೃಷ್ಣಯ್ಯ, ನಿವೃತ್ತ ಪ್ರಾಧ್ಯಾಪಕ ಡಾ.ಆರ್‌.ಕೃಷ್ಣಶಾಸ್ತ್ರೀ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next