ನಿಡಗುಂದಿ: ತೊಗರಿ ಬಾಕಿ ಹಣ ಬಿಡುಗಡೆ ಮಾಡಬೇಕು ಹಾಗೂ ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿ ನಿಂಗರಾಜ ಆಲೂರ ಮಾತನಾಡಿ, ಸರಕಾರ ಜಿಲ್ಲೆಯ 78 ಸಾವಿರ ರೈತರಿಂದ 8.46 ಲಕ್ಷ ಕ್ವಿಂಟಲ್ ತೊಗರಿ ಖರೀದಿ ಮಾಡಿದೆ. 29 ಸಾವಿರ ರೈತರಿಗೆ ಹಣ ಜಮಾ ಮಾಡಿದ್ದು ಉಳಿದ 49 ಸಾವಿರ
ರೈತರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಸತತ ಬರಗಾಲದಿಂದ ತತ್ತರಿಸಿದ ರೈತರು ಸಾಲ ಸುಳಿಯಲ್ಲಿ ಸಿಲುಕಿದ್ದಾರೆ. ಕೂಡಲೇ ಬಾಕಿ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಬೀಜ,ಗೊಬ್ಬರ,ಕೂಲಿ ಸೇರಿದಂತೆ ಲಕ್ಷಾಂತರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರಿಗೆ ಸಾವಿರ ರೂ. ಬರುತ್ತಿಲ್ಲ. ಸ್ಥಳೀಯ ದರ 200-300 ರೂ. ಇರುವುದರಿಂದ ರೈತರಿಗೆ ಹಾನಿಯಾಗಿದ್ದು ಈರುಳ್ಳಿಗೆ ಕನಿಷ್ಠ 1,500 ರೂ. ಬೆಂಬಲ ಬೇಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕಾಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, ಸಿಎಂ ಕುಮಾರಸ್ವಾಮಿ ಚುನಾವಣೆ ಪೂರ್ವ ಹೇಳಿದ ಮಾತಿನಂತೆ ನಡೆದುಕೊಂಡು ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ರೈತ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
ಶಿವಲಿಂಗ ಹಂಗರಗಿ, ವೆಂಕಟೇಶ ವಡ್ಡರ, ವಿಶ್ವನಾಥ ಕೂಡಿ, ಬಸಯ್ಯ ಹೊಳ್ಳಿ, ಭೀಮಪ್ಪ ಸಿದ್ದನಾಥ, ಮೈಬೂಬಸಾಬ ದ್ಯಾಂಪುರ, ಪುಲಿಯಪ್ಪ ವಡ್ಡರ, ಹುಸೇನಸಾಬ ನದಾಫ್, ಬಶೀರಹ್ಮದ ನದಾಫ್, ಲಕ್ಷ್ಮಣ ಲಮಾಣಿ, ಸುಭಾಷ್ ಕುಪ್ಪಸ್ತ, ಸಿದ್ದಪ್ಪ ವಾಲೀಕಾರ ಇದ್ದರು.