Advertisement

ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ

05:33 PM May 14, 2019 | Team Udayavani |

ಯಾದಗಿರಿ: ನಗರದ ಮಹಾತ್ಮ ಗಾಂಧಿ ನಗರ ತಾಂಡಾದ ಜನರಿಗೆ ಮೂಲ ಸೌಕರ್ಯಗಳನ್ನು ನೀಡದಿರುವ ಸರ್ಕಾರ ನಿರ್ಲಕ್ಷ್ಯವನ್ನು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಜಿಲ್ಲಾ ಸಂಘಟನಾ ಸಮಿತಿ ತೀವ್ರ ಖಂಡಿಸಿದೆ.

Advertisement

ನಗರದ ಹೃದಯ ಭಾಗದಲ್ಲಿರುವ ಗಾಂಧಿ ನಗರದಲ್ಲಿ ಅಗತ್ಯ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸುಭಾಷ ವೃತ್ತದವರೆಗೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.

ಬಡಾವಣೆ ಎದುರು ರಾಷ್ಟ್ರೀಯ ಹೆದ್ದಾರಿ 150ರ ಪಕ್ಕದಲ್ಲಿ ಜಿಲ್ಲಾಧಿಕಾರಿ ಮನೆ, ಸರ್ಕಾರದ ವಿವಿಧ ಕಚೇರಿಗಳಿದ್ದು, ಇದರ ಸುತ್ತಮುತ್ತ ಬಡವರು, ಕೂಲಿಕಾರರು ವಾಸಿಸುತ್ತಿದ್ದು, ಇಲ್ಲಿ ಸೌಕರ್ಯಗಳಿಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ.

ಇಲ್ಲಿಯ ಮಹಿಳೆಯರು, ವಯಸ್ಕ ಹೆಣ್ಣು ಮಕ್ಕಳು, ಬಾಲಕಿಯರು ಸಹಜ ಕ್ರಿಯೆಗೆ ಎಲ್ಲಿಗೆ ಹೋಗುವುದು ಎಂದು ತಂದೆ-ತಾಯಂದಿರ ಮುಂದೆ ಕಣ್ಣೀರು ಹಾಕುತ್ತಿರುವುದು ಯಾವ ಆಡಳಿತಾಧಿಕಾರಿಗಳಿಗೂ ಕಾಣಿಸುತ್ತಿಲ್ಲ. ಈ ಬಡಾವಣೆ ಮಹಿಳೆಯರು ಮತ್ತು ಪುರುಷರಿಗಾಗಿ ಶೌಚಾಲಯ ಕಟ್ಟಲು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿ ಶೌಚಾಲಯಕ್ಕೆ ಕೀಲಿ ಹಾಕಿದ ನಗರಸಭೆ ಅಧಿಕಾರಿಗಳು ಹಲವು ವರ್ಷಗಳಿಂದ ಅದರ ಕಡೆ ಸುಳಿದಿಲ್ಲ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಎಸ್‌ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ, ಸದಸ್ಯರಾದ ಸೈದಪ್ಪ ಹೆಚ್.ಪಿ, ರಾಮಲಿಂಗಪ್ಪ ಬಿ.ಎನ್‌, ಸಿಂಧು ಬಿ, ಸುಭಾಶ್ಚಂದ್ರ ಬಿ.ಕೆ, ಸವಿತಾ, ಗೀತಾ, ಮಹೆಬೂಬಿ ಬೇಗಂ ಸೇರಿದಂತೆ ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next