ಕಲಬುರಗಿ: ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ನೀಡುವಂತೆ ಹಾಗೂ ಹೆಚ್ಚಿಸಿರುವ ಶುಲ್ಕ ಕಡಿತಗೊಳಿಸಬೇಕು ಎಂದು ಆಗ್ರಹಿಸಿ
ಎಐಡಿಎಸ್‌ಒ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.
ನಂತರ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿ, ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದವರು, ಕೃಷಿ, ಕೂಲಿಕಾರರ ಮಕ್ಕಳು ಓದುತ್ತಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿದೆ. ಇಂತಹ ಸಮಯದಲ್ಲಿ ಈಗಾಗಲೇ ಇರುವ ಶುಲ್ಕವನ್ನು ಕಡಿತಗೊಳಿಸುವ ಬದಲು ಹೆಚ್ಚಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿದ ಅವರು, ಹೆಚ್ಚಿಸಿರುವ ಶುಲ್ಕವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು, ವಿದ್ಯಾರ್ಥಿ ವಿರೋಧಿ ನೀತಿ ಕೈಬೀಡಬೇಕೆಂದು ಒತ್ತಾಯಿಸಿದರು. ಈಗಾಗಲೇ ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಅಧಿಕ ಶುಲ್ಕ ಹಾಗೂ ವಿನಾಯಿತಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ತಕ್ಷಣ ಮರಳಿ ನೀಡಬೇಕು. ಯಾವುದೇ ರೀತಿಯ ಅಧಿಕ ಶುಲ್ಕವನ್ನು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿಧಿಸಬಾರದು ಎಂದು ಒತ್ತಾಯಿಸಿದರು. ಎಐಡಿಎಸ್‌ಒ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಣಮಂತ ಎಸ್. ಎಚ್ ಹಾಗೂ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.