ರಾಣಿಬೆನ್ನೂರ: ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಸ್ಥಳೀಯ ಎಬಿವಿಪಿ ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟಿಸಿ ತಹಸೀಲ್ದಾರ್‌ಗೆ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ನಗರ ಸಹ ಕಾರ್ಯದರ್ಶಿ ಟಿಪ್ಪು ಕುಸಗೂರ ಮಾತನಾಡಿ, ಶಿಕ್ಷಣ ಎಂಬುವುದು ಸರ್ವರಿಗೂ ಸಿಗಬೇಕಾಗಿರುವ ಅಮೂಲ್ಯ ಸಂಪತ್ತು. ಜಾತಿ-ಮತ, ಬಡವ-ಶ್ರೀಮಂತನೆನ್ನದೆ ಎಲ್ಲರಿಗೂ ಸಿಗುವಂತೆ ಮಾಡುವ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ ಎಂದರು.
ಆದರೆ, 2018-19ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರಿ ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇವತ್ತಿನವರೆಗೂ ಈ ಯೋಜನೆ ಜಾರಿಗೆ ಬಾರದಿರುವುದರಿಂದಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ದಿನಗಳಲ್ಲಿ ಹೆಚ್ಚಾಗಿ ಬಸ್‌ಪಾಸ್ ಪಡೆಯುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ರಾಜ್ಯದಲ್ಲಿನ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಬೇಕೆಂದು ಆಗ್ರಹಿಸಿದರು.
ಹಳ್ಳಿಗಳಿಂದ ತಾಲೂಕು ಪಟ್ಟಣಗಳಿಗೆ ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸುವುದರಿಂದ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಕಳೆದ ವರ್ಷವು ಹಣವಿಲ್ಲವೆಂಬ ನೆಪವೊಡ್ಡಿದ್ದ ರಾಜ್ಯ ಸರ್ಕಾರ ಈ ವರ್ಷವೂ ಕೂಡಾ ವಿದ್ಯಾರ್ಥಿಗಳ ಬೇಡಿಕೆಯನ್ನ ಈಡೇರಿಸಲು ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.
ತಾಲೂಕು ಸಂಚಾಲಕ ರಾಘವೇಂದ್ರ ಪಿ., ಬಸವರಾಜ, ಸಂಜೀವಕುಮಾರ, ಅನ್ನಪೂರ್ಣ ದುಂಡೇಶ, ಕೀರ್ತಿಕುಮಾರ, ರಮೇಶ, ವಿಶ್ವ, ಪ್ರದೀಪ, ರೇವಣಸಿದ್ದ, ಸಚಿನ್, ನಾಗರಾಜ ಸೇರಿದಂತೆ ಎಬಿವಿಪಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.