ಮಲ್ಪೆ: ಅಸಾನಿ ಚಂಡ ಮಾರುತದಿಂದಾಗಿ ಕಡಲ ಅಬ್ಬರ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಕಡಲತೀರ, ಬೀಚ್ ಗಳಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ, ಜಲಸಾಹಸ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಮೇ 8ರ ಮಧ್ಯಾಹ್ನದಿಂದಲೇ ಬಹುತೇಕ ಕರಾವಳಿಯಲ್ಲಿ ಬೀಚ್ ನಿಷೇಧ ಮಾಡಲಾಗಿದೆ.
ವಾರಾಂತ್ಯದ ಹಿನ್ನೆಲೆಯಲ್ಲಿ ಶನಿವಾರ, ರವಿವಾರ ಬೆಳಗ್ಗಿನಿಂದಲೇ ಹೆಚ್ಚಿನ ಪ್ರವಾಸಿಗರು ಮಲ್ಪೆ ಕಡೆಗೆ ಆಗಮಿಸಿದ್ದು ಬೀಚ್‌ನಲ್ಲಿ ಜನಸಂದಣಿ ಕಂಡು ಬಂದಿದೆ.
ಮೇ 16ರಿಂದ ಸೆ. 15 ವರೆಗೆ ನಿಷೇಧ
ಮಲ್ಪೆ ಸೀವಾಕ್ ಬಳಿ ಮತ್ತು ಮಲ್ಪೆ ಬೀಚ್ ನಿಂದ ಸೈಂಟ್‌ಮೇರೀಸ್ ಐಲ್ಯಾಂಡ್‌ಗೆ ಹೊರಡುವ ಪ್ರವಾಸಿ ಬೋಟ್ ಯಾನ ಮತ್ತು ಬೀಚ್‌ನಲ್ಲಿ ನಡೆಯುವ ಜಲಸಾಹಸ ಕ್ರೀಡೆಗಳನ್ನು ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ದವಾಗಿರುವ ಹಿನ್ನೆಲೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮೇ 16ರಿಂದ ಸೆ. 15ರ ವರೆಗೆ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಪಶ್ಚಿಮ ಕರಾವಳಿ ಯಲ್ಲಿ ಬೋಟ್ ಚಲಾಯಿಸಲು ಅನುಮತಿ ಇರುವುದಿಲ್ಲ.
ಹೆಚ್ಚಿನ ಪ್ರವಾಸಗರು ಇಲ್ಲಿಗೆ ಬರುತ್ತಿರುವ ಕಾರಣ ಮತ್ತು ಸಮುದ್ರ ಸಹಜ ಸ್ಥಿತಿಗೆ ತಲುಪಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಸೌಂದರ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಹೆಚ್ಚುವರಿ ದಿನಗಳ ಅವಕಾಶವನ್ನು ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಜೂ. 1ರಿಂದ ಪ್ರವಾಸಿಗರು ಕಡಲಿಗಿಳಿಯದಂತೆ ಬೀಚ್ ಉದ್ದಕ್ಕೂ ನೆಟ್‌ಗಳನ್ನು ಅಳವಡಿಸಲಾಗುವುದು. ಒಂದು ವೇಳೆ ಅವಧಿಗೆ ಮೊದಲೇ ಸಮುದ್ರದಲ್ಲಿ ಏರುಪೇರು ಕಂಡು ಬಂದರೆ ಸೂಕ್ತ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗುವುದು.
– ಸುದೇಶ್ ಶೆಟ್ಟಿ ನಿರ್ವಾಹಕರು, ಬೀಚ್ ಅಭಿವೃದ್ಧಿ ಸಮಿತಿ