ಕಲಬುರಗಿ: ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ತಾಲೂಕುಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಘೋಷಿತ ಆರು ತಾಲೂಕುಗಳಲ್ಲಿ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು, ಬರ ಪರಿಹಾರಕ್ಕೆ ಎಕರೆಗೆ 10 ಸಾವಿರ ರೂ. ನೀಡಬೇಕು, ಕೂಲಿಕಾರರು ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಇರುವ ತೊಂದರೆ ನಿವಾರಿಸಬೇಕು, ವರ್ಷಕ್ಕೆ 100 ದಿನಗಳ ಬದಲು ಬರಗಾಲದ ಅಂಗವಾಗಿ ಕೆಲಸದ ಮಿತಿ ತೆಗೆದುಹಾಕಬೇಕು, ಕೂಲಿಕಾರರು ಕೇಳಿದ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಬರದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಪಟ್ಟಣಗಳಿಗೂ ವಿಸ್ತರಿಸಿ ಅಲ್ಲಿನ ಕೂಲಿಕಾರರಿಗೂ ಕೆಲಸ ನೀಡಬೇಕು. ಜಾನುವಾರುಗಳಿಗೆ ಗ್ರಾ.ಪಂ. ಮಟ್ಟದಲ್ಲಿ ಮೇವು ಬ್ಯಾಂಕ್ ತೆರೆಯಬೇಕು, ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ 2 ಲಕ್ಷ ರೂ.ಗಳ ರೈತರ ಸಾಲ ಮನ್ನಾ ಮಾಡಿದ್ದು, ಉಳಿದ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರದ ಫಸಲ್ ವಿಮಾ ಯೋಜನೆ ವಿಮಾ ಕಂಪನಿಗಳ ಪರವಾಗಿದ್ದು, ಅದರ ಬದಲು ರಾಜ್ಯ ಸರ್ಕಾರ ಪರ್ಯಾಯ ಬೆಳೆ ವಿಮೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಡಾ| ಸ್ವಾಮಿನಾಥನ್ ವರದಿಯಂತೆ ತೊಗರಿಗೆ 7500ರೂ. ಗಳ ಬೆಂಬಲ ಬೆಲೆ ನಿಗದಿಪಡಿಸಬೇಕು, ಕೇಂದ್ರ ಸರ್ಕಾರ ಶೇ.25 ರಷ್ಟು ಕೋಟಾ ನಿಗದಿಪಡಿಸಿದ್ದು, ರೈತರು ಬೆಳೆದ ಬೆಳೆ ಖರೀದಿ ಮಾಡಲು ಕಾನೂನು ರೂಪಿಸುವಂತೆ ಒತ್ತಾಯಿಸಿದರು. ರಾಜ್ಯ ಸರ್ಕಾರ ಕಳೆದ ವರ್ಷದಂತೆ ಈ ವರ್ಷವೂ ಪ್ರತಿ ಕ್ವಿಂಟಲ್‌ಗೆ 600 ರೂ. ಬದಲು 1000 ರೂ. ಪ್ರೋತ್ಸಾಹ ಧನ ನೀಡಬೇಕು. ಗ್ರಾ.ಪಂ. ಮಟ್ಟದಲ್ಲಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಶಾಂತಪ್ಪ ಪಾಟೀಲ, ಮಲ್ಲಣ್ಣಗೌಡ ಬನ್ನೂರ, ಸುಭಾಷ ಹೊಸ್ಮನಿ, ಪಾಂಡುರಂಗ ಮಾವಿನಕರ, ಸಿದ್ದಯ್ಯ ಸ್ವಾಮಿ, ಗೌರಮ್ಮ ಪಾಟೀಲ, ಸುಧಾಮ ಧನ್ನಿ ಹಾಗೂ ಇತರರು ಭಾಗವಹಿಸಿದ್ದರು.