ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್)ನ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಕರೆ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸೋಮವಾರ (ಆಗಸ್ಟ್ 15) ಬಂಧಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಹಣ ಕೊಡದ ಲಾರಿ ಚಾಲಕನನ್ನು ಬಂದೂಕಿನಿಂದ ಸುಡುತ್ತೇನೆಂದ ಅರಣ್ಯ ಇಲಾಖೆ ನೌಕರ : ವಿಡಿಯೋ ವೈರಲ್
ಇಂದು ಬೆಳಗ್ಗೆ ಮುಂಬೈನ ಗಿರ್ಗಾಂವ್ ನಲ್ಲಿರುವ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಲ್ಯಾಂಡ್ ಲೈನ್ ದೂರವಾಣಿ ಮೂಲಕ ವ್ಯಕ್ತಿಯೊಬ್ಬ ಮೂರ್ನಾಲ್ಕು ಬೆದರಿಕೆ ಕರೆ ಮಾಡಿದ್ದ. ಬಂಧಿತ ವ್ಯಕ್ತಿಯನ್ನು ಅಫ್ಜಲ್ ಎಂದು ಗುರುತಿಸಲಾಗಿದೆ.
ದೂರವಾಣಿ ಕರೆ ಮಾಡಿದ ನಂಬರ್ ಅನ್ನು ಪತ್ತೆಹಚ್ಚುವ ಮೂಲಕ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ, ಬಂಧಿತ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಅಂಬಾನಿಯವರಿಗೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ. ಮುಂಬೈಯಲ್ಲಿರುವ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ವರ್ಗಕ್ಕೆ ಕೇಂದ್ರ ಸರ್ಕಾರದ ಭದ್ರತೆಯನ್ನು ಮುಂದುವರಿಸಬಹುದು ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶ ನೀಡಿ, ಕೇಂದ್ರದ ನಿಲುವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.