Advertisement

ವಿಟಮಿನ್‌ ಎಂ ಇದ್ದವರಿಗೆ ಗದ್ದುಗೆ: ಸುಧಾಕರ್‌

07:16 AM Mar 08, 2019 | |

ಚಿಕ್ಕಬಳ್ಳಾಪುರ: ನಿಗಮ ಮಂಡಳಿ ಪುಟಗೋಸಿಗೆ ಸಮಾನ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೈ ತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಖರ್‌, ನಿವೃತ್ತ ಐಎಎಸ್‌ ಅಧಿಕಾರಿ ಜಯರಾಮ್‌ ಬಳಿ ವಿಟಮಿನ್‌ ಎಂ (ಹಣ) ಜಾಸ್ತಿ ಇದ್ದ ಕಾರಣ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾದು ಕಾದು ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಿದ್ದಾರೆ ಎಂದು ಸಿಎಂ ವಿರುದ್ಧ ತಮ್ಮ ವಾಗ್ಧಾಳಿ ಮುಂದುವರಿಸಿದ್ದಾರೆ.

Advertisement

ಕ್ಷೇತ್ರದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿ ಐದು ದಿನಗಳ ಹಿಂದೆಯಷ್ಟೇ ನಿವೃತ್ತರಾಗಿರುವ ಜಯರಾಮ್‌ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಲು ಮುಖ್ಯಮಂತ್ರಿಗಳು ಇಷ್ಟು ದಿನ ಕಾದಿದ್ದಾರೆ ಎಂದರು. 

ನನ್ನ ಬಳಿ ಮಿಟಮಿನ್‌ ಮಾತ್ರ ಇತ್ತು. ಆದರೆ ಜಯರಾಮ್‌ ಬಳಿ ಮಿಟಮಿನ್‌ ಎಂ ಜಾಸ್ತಿ ಇತ್ತು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಹಾಗಾಗಿ ಅವರ ನಿವೃತ್ತಿಯವರೆಗೂ ಕಾದು ಸಿಎಂ ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನೇಮಕ ಮಾಡಿದ್ದಾರೆ. ಅವರ ನೇಮಕಕ್ಕಾಗಿ ಸುಪ್ರೀಂಕೋರ್ಟ್‌ನ ಯಾವುದೇ ಮಾನದಂಡಗಳು ಅಡ್ಡಿ ಬರಲಿಲ್ಲವೇ ? ಇವರ ನೇಮಕವನ್ನು ನೇರ ನೇರ ಮಾಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು. 

ಬಳುವಳಿಗೆ ಪ್ರಯತ್ನ ಮಾಡಬೇಡಿ: ಜಯರಾಮ್‌ ಅವರಿಗೆ ಸುಪ್ರೀಂಕೋರ್ಟ್‌ ಪ್ರತ್ಯೇಕವಾಗಿ ಆದೇಶ ಮಾಡಿತ್ತಾ? ರಾಜ್ಯದ ಜನತೆ ಇದನ್ನೆಲ್ಲಾ ನೋಡುತ್ತಾರೆ. ನಾವು ಅವರು ಜೊತೆ ಕೈಜೋಡಿಸಿರುವುದು ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕೆಂಬ ಏಕೈಕ ಉದ್ದೇಶದಿಂದ. ಕಾಂಗ್ರೆಸ್‌ ಪಕ್ಷವನ್ನು ಬಳುವಳಿ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಬೇಡಿ ಎಂದು ಸಿಎಂ ವಿರುದ್ಧ ಕಿಡಿಕಾರಿದರು. 

ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಮೋಹನ್‌ ರೆಡ್ಡಿ, ದ್ಯಾವಣ್ಣ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಹಾಪ್‌ಕಾಮ್ಸ್, ಮಾಜಿ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌, ಎಪಿಎಂಸಿ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ಮುಖಮಡರಾದ ಜೆ.ಸಿ.ಬಿ ಮಂಜು, ಮಲ್ಲಪ್ಪ, ಸುಧಾ, ನಂದಿ ಮುನಿಸ್ವಾಮಿ, ಮುಖಂಡರಾದ ಮಿಲ್ಟನ್‌ ವೆಂಕಟೇಶ್‌, ರಾಜಣ್ಣ, ದೇವಿಶೆಟ್ಟಿಹಳ್ಳಿ ಗಂಗಾಧರ್‌, ಜಗದೀಶ್‌ ರೆಡ್ಡಿ, ನಾರಾಯಣಸ್ವಾಮಿ, ಭಾಗ್ಯಮ್ಮ, ತಾಪಂ ಇ.ಒ ಸಂಜೀವಪ್ಪ, ಎಇಇ  ಅನಿಲ್‌ ಇದ್ದರು. 

Advertisement

ಜೆಡಿಎಸ್‌ ಸಂಭ್ರಮಾಚರಣೆಗೆ ಸುಧಾಕರ್‌ ಆಕ್ರೋಶ: ಬುಧವಾರ ಜೆಡಿಎಸ್‌ನವರು ನಗರದ ನಾಲ್ಕು ಸರ್ಕಲ್‌ಗ‌ಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದು ಜೆಡಿಎಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ. ಎಲ್ಲದಕ್ಕೂ ಕೊನೆ ಅಥವಾ ಅಂತ್ಯ ಇರುತ್ತದೆ. ಪಾಪದ ಕೊಡವನ್ನು ಬೇಗ ತುಂಬಿಸಿಕೊಳ್ಳಕ್ಕೆ ಹೊರಟವರೆ. ಇಂತವರಿಗೆ ರಾಜ್ಯದ ನಾಯಕತ್ವ ವಹಿಸಿರುವ ನಾಯಕರು ಬುದ್ಧಿ ಹೇಳಬೇಕಿದೆ ಎಂದು ಶಾಸಕ ಸುಧಾಕರ್‌ ಹೇಳಿದರು. 

ಕೋಲಾರದಲ್ಲಿ ಏಳು ಬಾರಿ ಸಂಸದರಾಗಿರುವ  ಹಿರಿಯ ನಾಯಕರಾದ ಕೆ.ಎಚ್‌.ಮುನಿಯಪ್ಪ ಹಾಗೂ ನಮ್ಮ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ತಿಳಿಸಿದರು.

3.75 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ: ಕ್ಷೇತ್ರದಲ್ಲಿ ಬರೋಬ್ಬರಿ 3.75 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಸುಧಾಕರ್‌ ಶಂಕುಸ್ಥಾಪನೆ ನೆರವೇರಿಸಿದರು. ನಂದಿ ಗ್ರಾಪಂ ಸುಲ್ತಾನಪೇಟೆ- ಸಿಂಗಾಟಕದಿರೇನಹಳ್ಳಿ ಗ್ರಾಮದ ದಲ್ಲಿ 10 ಲಕ್ಷ ರೂ. ವೆಚ್ಚದ ರಸ್ತೆ ಡಾಂಬರೀಕರಣ, ಮುದ್ದೇನಹಳ್ಳಿ ಗ್ರಾಪಂ ಕಂಗಾನಹಳ್ಳಿ, ಮಧುರೇನಹಳ್ಳಿ ಗ್ರಾಮಗಳನ್ನು ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಮಾದರಿ ಗ್ರಾಮಗಳನ್ನಾಗಿ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು. 

ಚಿಕ್ಕಬಳ್ಳಾಪುರ-ಕೇತೇನಹಳ್ಳಿ ಮುಖ್ಯ ರಸ್ತೆಯಿಂದ ಸೂಲಿಕುಂಟೆ ಗ್ರಾಮದವರೆಗೆ 11 ಲಕ್ಷ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿ, ದಿಬ್ಬೂರು-ಪುರದಗಡ್ಡೆ ರಸ್ತೆಯನ್ನು 1.50 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಹಾಗೂ ಹಾರೋಬಂಡೆ ಗಾಪಂ ಮರಸನಹಳ್ಳಿ ಹಾಗೂ ಹೊಸವುಡ್ಯ ಗ್ರಾಪಂ ಜಾತಿವಾರು ಗ್ರಾಮಗಳನ್ನು ಗ್ರಾಮವಿಕಾಸ ಯೋಜನೆಯಡಿ ಅಭಿವೃದ್ಧಿಪಡಿಸುವ ತಲಾ 1 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಶಿಡ್ಲಘಟ್ಟ-ವಿಜಯಪುರ ರಸ್ತೆಯಿಂದ ನೆಲಮಾಕಲಹಳ್ಳಿ ಮಾರ್ಗವಾಗಿ ಕಡಿಸೀಗೇನಹಳ್ಳಿ ಸೇರುವ ರಸ್ತೆಯನ್ನು 28.53 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣಗೊಳಿಸುವ ಕಾಮಗಾರಿಗೆ ಸೇರಿದಂತೆ ಒಟ್ಟು 3.75 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next