Advertisement

ಆರೋಗ್ಯದಲ್ಲಿ ವಿಜಯಪುರ ಮಾದರಿಗೆ ಪಣ

12:39 PM Dec 17, 2018 | |

ವಿಜಯಪುರ: ಹಲವು ರಂಗಗಳಲ್ಲಿ ಅತ್ಯಂತ ಹಿಂದುಳಿರುವ ಆರೋಗ್ಯ ಸಚಿವರ ತವರು ಜಿಲ್ಲೆ ವಿಜಯಪುರ ಜಿಲ್ಲೆಯನ್ನು ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿ ಮಾಡಲು ಪಣ ತೊಡಲಾಗಿದೆ. ಇದಕ್ಕಾಗಿ ಹಲವು ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳ ತಂಡವನ್ನು ಸಜ್ಜುಗೊಳಿಸುವ ಕೆಲಸ ಭರದಿಂದ ನಡೆದಿದೆ.

Advertisement

ಭಾರತೀಯ ಆರೋಗ್ಯ ಸೇವಾ ವ್ಯವಸ್ಥೆ (ಐಪಿಎಚ್‌ಎಸ್‌) ಮಾರ್ಗಸೂಚಿ ಅನ್ವಯ ಈಗಿರುವ 35 ವೈದ್ಯರ ಜೊತೆಗೆ ಇನ್ನೂ 15 ವೈದ್ಯರು ಸೇರಿದಂತೆ ಮಂಜೂರಾಗಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಪೂರ್ಣಪ್ರಮಾಣದಲ್ಲಿ ನೇಮಿಸವುದು. ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವ ವೈದ್ಯರ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಲಹಾ ಸಮಿತಿ ರಚಿಸುವುದು. ಖಾಸಗಿ ಆರೋಗ್ಯ ಸೇವೆಯಲ್ಲಿರುವ ವಿವಿಧ ತಜ್ಞ ವೈದ್ಯರ ಸೇವೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬಳಸಿಕೊಂಡು ಗುಣಮಟ್ಟದ ಯೋಜನೆ ರೂಪಿಸಲಾಗಿದೆ.

ಅಲ್ಲದೇ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆಧುನಿಕ ಸುಧಾರಿತ ವೈದ್ಯಕೀಯ ಯಂತ್ರೋಪಕರಣಗಳು, ಶೌಚಾಲಯ, ನಿರಂತರ ವಿದ್ಯುತ್‌, ಕುಡಿಯುವ ನೀರು, ಸುಂದರ ಉದ್ಯಾನವನ ನಿರ್ಮಾಣದಂಥ ಸೇವೆಗಳನ್ನು ಕಲ್ಪಿಸುವ ಮೂಲಕ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲೇ ಇಂಥ ಪ್ರಯೋಗ ಮಾಡಲಾಗುತ್ತಿದೆ.

ಇದಕ್ಕಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿದ್ದು, ಕಳೆದ ಎರಡು ದಿನಗಳಿಂದ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಅಧಿಕಾರಿಗಳ ತಂಡದೊಂದಿಗೆ ಮ್ಯಾರಾಥಾನ್‌ ಸಭೆ ನಡೆಸಿದ್ದಲ್ಲದೇ, ಆಸ್ಪತ್ರೆಯ ಪ್ರತಿ ವಾರ್ಡ್‌ನಲ್ಲೂ ಸುತ್ತು ಹಾಕಿ ವ್ಯವಸ್ಥೆಯನ್ನು ಖುದ್ದು ಅವಲೋಕಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿರುವ
ವಿಶಾಲ ಸ್ಥಳದಲ್ಲಿ ರಾಜ್ಯದಲ್ಲೇ ಎಲ್ಲೂ ಇಲ್ಲದ ಆರೋಗ್ಯ ಸೇವೆಗಳ ಘಟಕಗಳನ್ನು ನಿರ್ಮಾಣ ಮಾಡಲು ಯೋಚಿಸುತ್ತಿದ್ದಾರೆ.

ರಾಜ್ಯದ ಯಾವ ಆಸ್ಪತೆಯಲ್ಲೂ ದೊರೆಯದ ಆರೋಗ್ಯ ಸೇವೆಗಳು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ದೊರೆಯುವಂತೆ ಮಾಡಬೇಕು. ಇಲ್ಲಿನ ಮಾರಿಯನ್ನೇ ರಾಜ್ಯದ ಇತರೆ ಜಿಲ್ಲಾ ಆಸ್ಪತ್ರೆಯಲ್ಲಿ ಮಾದರಿಯಾಗಿ ಅನುಸರಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಇದಕ್ಕಾಗಿ ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ| ಶರಣಪ್ಪ ಕಟ್ಟಿ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಮಾದರಿ ಯೋಜನೆಯ ನೀಲ ನಕ್ಷೆ ಹಾಗೂ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿದ್ದಾರೆ. ಅಲ್ಲದೇ ಈ ಮಹತ್ವ ಕೆಲಸಕ್ಕೆ ನಿವೃತ್ತ ಡಿಎಚ್‌ಒ ಡಾ| ಗುಂಡಪ್ಪ ಸೇರಿದಂತೆ ಇತರೆ ವೈದ್ಯಕೀಯ ಅಧಿಕಾರಿಗಳ ಸಲಹೆ, ಸೂಚನೆ ಸಹಿತ ಅಗತ್ಯ ಸಹಕಾರ ನೀಡಲು ಕೂಡ ಕೋರಿದ್ದಾರೆ.

Advertisement

ಅಂದುಕೊಂಡಂತೆ ನಿರೀಕ್ಷಿತ ಈ ಆರೋಗ್ಯ ಸೇವೆ ಮಾದರಿ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ವಿಜಯಪುರ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿ ರಾಜ್ಯದ ವೈದ್ಯ ಲೋಕ ಇತ್ತ ಚಿತ್ತ ನೆಡುವ ಕಾಲ ದೂರ ಇಲ್ಲ.

ಐಪಿಎಚ್‌ಎಸ್‌ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರಿ ಆರೋಗ್ಯ ಸೇವೆಯನ್ನು ಗುಣಮಟ್ಟ ಹೆಚ್ಚಿಸಲು
ಯೋಜನೆ ರೂಪಿಸಲಾಗುತ್ತಿದೆ. ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ಮಾರ್ಗದರ್ಶನದಲ್ಲಿ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 
ಡಾ| ಶರಣಪ್ಪ ಕಟ್ಟಿ, ಶಸ್ತ್ರ ಚಿಕಿತ್ಸಕರು, ಸರ್ಕಾರಿ ಜಿಲ್ಲಾ ಆಸ್ಪತೆ

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next