Advertisement

ಸುಣ್ಣ ಎಂಬ ಸಿರಿ ಬಳಕೆಗೆ, ಬಾಳಿಕೆಗೆ…

09:00 AM Jun 18, 2019 | Sriram |

ಮನೆಯನ್ನು ನೀರು ನಿರೋಧಕ ಮಾಡುವ ಹಾಗೂ ಗೋಡೆಗೆ ತೊಳೆಯಬಹುದಾದ ಬಣ್ಣಗಳನ್ನು ಬಳಸುವಭರಾಟೆಯಲ್ಲಿ ನಾವು ನಮ್ಮ ಮನೆಗಳನ್ನು ನಿರ್ಜೀವಗೊಳಿಸುತ್ತಿದ್ದೇವೆ. ಸುಣ್ಣ ಹೊಡೆದ ಗೋಡೆಗಳಲ್ಲಿ ಸಣ್ಣಸಣ್ಣ ರಂಧ್ರಗಳಿದ್ದು- ನಮ್ಮ ಚರ್ಮದಲ್ಲಿ ಇರುವಂತೆಯೇ ಇದ್ದು, ಇವುಗಳ ಮೂಲಕ ಗೋಡೆಗಳು ಉಸಿರಾಡುತ್ತವೆ. ಇದರಿಂದಾಗಿ ಮನೆಯೊಳಗೆ ಶೇಖರವಾಗುವ ತೇವಾಂಶ ಇತ್ಯಾದಿ ಗೋಡೆಗಳ ಮೂಲಕ, ಒಳಗೂ ಹೊರಗೂ ಹರಿಯಲು ಸಹಾಯಕಾರಿ.

Advertisement

ಮಾರುಕಟ್ಟೆಯಲ್ಲಿ ವೈವಿಧ್ಯಮಯ ಬಣ್ಣಗಳು ಲಭ್ಯವಿರುವಾಗ, ಮನೆಗೆ ಯಾವುದು ಸೂಕ್ತ ಎಂದು ನಿರ್ಧರಿಸುವುದೇ ಕಷ್ಟದ ಕೆಲಸವಾಗಿ ಬಿಡುತ್ತದೆ. ದುಬಾರಿ ಬೆಲೆಯ ಬಣ್ಣಗಳು ಅಂಗಡಿಯವರಿಗೆ ಹೆಚ್ಚು ಲಾಭ ತರುವುದರಿಂದ ಅವರು ಅಗ್ಗದ ಬಣ್ಣಗಳನ್ನು ಮಾರುವುದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಸಾವಿರಾರು ವರ್ಷಗಳಿಂದ ನಮ್ಮಲ್ಲಿ ಉಪಯೋಗದಲ್ಲಿದ್ದದ್ದು ನೈಸರ್ಗಿಕವಾಗಿ ಲಭ್ಯವಿದ್ದ ಬಣ್ಣಗಳು. ಇವನ್ನು ಸಾಮಾನ್ಯವಾಗಿ ಸುಣ್ಣದೊಂದಿಗೆ ಬೆರೆಸಿ ಬಳಿಯಲಾಗುತ್ತಿತ್ತು. ಸುಣ್ಣವನ್ನು ನೀರಿನಲ್ಲಿ “ಕರಗಿಸಿ’ ಅಂದರೆ, ನೀರಿನೊಂದಿಗೆ ಬೆರೆಸಿ ಬಳಿದರೆ, ಅದು ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೆ„ಡ್‌ ಅನ್ನು ಹೀರಿಕೊಂಡು ಮತ್ತೆ ಸುಣ್ಣದ ಕಲ್ಲಿನ ತೆಳು ಪದರದಂತಾಗುತ್ತಿತ್ತು. ಈ ಪದರ, ನೀರು ನಿರೋಧಕ ಗುಣ ಹೊಂದಿದ್ದು ಸುಲಭದಲ್ಲಿ ಮಳೆಗೆ ಕೊಚ್ಚಿಕೊಂಡು ಹೋಗುತ್ತಿರಲಿಲ್ಲ. ಕೆಲವಾರು ವರ್ಷಗಳ ನಂತರ ಬಿಸಿಲಿಗೆ ಹಿಗ್ಗಿ, ಚಳಿಗೆ ಕುಗ್ಗಿ ಚಕ್ಕೆಗಳು ಏಳಲಾರಂಭಿಸಿದಾಗ ಮತ್ತೆ ಒಂದೆರಡು ಕೋಟ್‌- ಪದರ, ಸುಣ್ಣ ಬಳಿಯಬೇಕಾಗುತ್ತಿತ್ತು. ಸುಣ್ಣದ ವಿಶೇಷತೆ ಏನೆಂದರೆ, ಅದು ಕ್ರಿಮಿನಾಶಕ ಗುಣ ಹೊಂದಿದೆ. ಈ ಕಾರಣಕ್ಕೇ, ಕೀಟಗಳು ಒಂದಷ್ಟು ತಿಂಗಳುಗಳು ಹೊಸದಾಗಿ ಸುಣ್ಣ ಬಳಿದ ಗೋಡೆಗಳ ಬಳಿ ಸುಳಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಕ್ರಿಮಿಕೀಟಗಳು ಔಷಧ ನಿರೋಧಕ ಗುಣಗಳನ್ನು ಪಡೆದುಕೊಳ್ಳುತ್ತಿವೆ ಎಂದು ಹೇಳಲಾಗುತ್ತದೆ. ಎಷ್ಟೇ ಆ್ಯಂಟಿಬಯೋಟಿಕ್‌ ಬಳಸಿದರೂ ಅವುಗಳಿಗೆ ಬಗ್ಗುವುದೇ ಇಲ್ಲ ಎಂಬುದು ಪತ್ತೆಯಾಗಿದೆ. ಆದುದರಿಂದ ನಮ್ಮನ್ನು ಹಿಂದಿನಿಂದಲೂ ರಕ್ಷಿಸಿಕೊಂಡು ಬರುತ್ತಿರುವ ಸುಣ್ಣಗಳ ಬಳಕೆಯನ್ನು ಮನೆಯಲ್ಲಿ ಒಂದೆರಡು ಸ್ಥಾನಗಳಲ್ಲಾದರೂ ಮಾಡುವುದು ಸೂಕ್ತ.

ಸುಣ್ಣದ ಬಗೆಗಿನ ನಿರಾಸಕ್ತಿ
ಪ್ಲಾಸ್ಟಿಕ್‌ ಬಣ್ಣಗಳು ಅಂದರೆ ಪ್ಲಾಸ್ಟಿಕ್‌ ಎಮಲÒನ್‌- ವಾಷಬಲ್‌ ಡಿಸ್ಟೆಂಪರ್‌. ಅಂದರೆ, ತೊಳೆಯಬಹುದಾದ ಬಣ್ಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ನಂತರ ಸುಣ್ಣ ಬಳಿಯುವುದು ಅತಿ ಕಡಿಮೆಯಾಗಿದೆ. ಸುಣ್ಣದ ಕಲ್ಲನ್ನು ಸರಿಯಾಗಿ ಸುಟ್ಟಿರದಿದ್ದರೆ, ಅದರೊಂದಿಗೆ ಇತರೆ ವಸ್ತುಗಳು ಮಿಶ್ರಣವಾಗಿದ್ದು, ಗಾಳಿಯಲ್ಲಿ “ಕ್ಯೂರ್‌’ ಅಂದರೆ ಗಟ್ಟಿಗೊಳ್ಳುವ ಗುಣ ಹೊಂದಿರದಿದ್ದರೆ, ಮುಟ್ಟಿದಾಗ ಕೈಗೆ ಅಂಟಿಕೊಳ್ಳುತ್ತದೆ. ಹಾಗೆಯೇ ಬಟ್ಟೆ ತಗುಲಿದರೂ ಅದಕ್ಕೂ ಬಿಳಿ ಧೂಳು ಅಂಟುತ್ತದೆ. ಈ ಕಾರಣದಿಂದಾಗಿ ಜನ ಸುಣ್ಣ ಬಳಿಯಲು ಹಿಂಜರಿಯುತ್ತಾರೆ. ಆದರೆ, ಚೆನ್ನಾಗಿ ಸುಟ್ಟ ಹಾಗೂ ಉತ್ತಮ ಗುಣಮಟ್ಟದ ಸುಣ್ಣ ಕೆಲವೇ ದಿನಗಳಲ್ಲಿ ಸುಣ್ಣದ ಕಲ್ಲಿನಂತೆಯೇ ಆಗಿ ಅಷ್ಟೊಂದು ಸುಲಭದಲ್ಲಿ ಕೈಗೆ ಅಂಟುವುದಿಲ್ಲ. ಹಾಗೆ ನೋಡಿದರೆ, ಬಣ್ಣಗಳು ಎಷ್ಟೇ ದುಬಾರಿಯಾಗಿದ್ದರೂ, ಪ್ಲಾಸ್ಟಿಕ್‌ ಪದರದಂತೆಯೇ ಇದ್ದರೂ, ಅವೂ ಕೂಡ ಬೆವರು ಇಲ್ಲವೆ ಜಿಡ್ಡಿನ ಕೈಯಿಂದ ಮುಟ್ಟಿದರೆ ಮಾಸುವುದಂತೂ ಇದ್ದೇ ಇದೆ! ನಂತರ ಒದ್ದೆ ಬಟ್ಟೆಯಿಂದ ಒರೆಸಲು ನೋಡಿದರೆ ಈ “ತೊಳೆಯಬಹುದಾದ’ ಪ್ಲಾಸ್ಟಿಕ್‌ ಬಣ್ಣಗಳು ಮತ್ತೆ ತಮ್ಮ ಮೂಲ ಬಣ್ಣಕ್ಕೆ ತಿರುಗದೆ ತೇಪೆ ಆದಂತೆ ಕಾಣುತ್ತದೆ. ನಮ್ಮ ಜನ ದುಬಾರಿ ಬೆಲೆಯ ಬಣ್ಣ ಹೊಡೆದ ಗೋಡೆಗಳನ್ನು ಮುಟ್ಟಲು ಹಿಂಜರಿದಂತೆ, ಬಡಪಾಯಿ ಸುಣ್ಣ ಬಳಿದ ಬಣ್ಣದ ಗೋಡೆಗಳಿಗೆ ತಮ್ಮ ಎಣ್ಣೆ ಹಾಕಿದ ತಲೆಗಳನ್ನೇ ಆನಿಸಲು ಹಿಂಜರಿಯುವುದಿಲ್ಲ! ಹಾಗಾಗಿ ಸುಣ್ಣವಾಗಲಿ, ಪ್ಲಾಸ್ಟಿಕ್‌ ಎಮಲÒನ್‌ ಆಗಲಿ, ಹೊಡೆದ ಗೋಡೆಗೆ ಆದಷ್ಟೂ ಕೈಯಿಂದ ಮುಟ್ಟುವುದನ್ನು, ತಲೆ ಆನಿಸುವುದನ್ನು ಮಾಡದಿರುವುದು ಒಳ್ಳೆಯದು!

ಸೂರಿನ ಕೆಳಗಾದ್ರೂ ಇರಲಿ
ಅಕ್ಕಪಕ್ಕದವರು ನವನವೀನ ಬಣ್ಣಗಳಿಂದ ಮಿಂಚುತ್ತಿರಬೇಕಾದರೆ ನಾವೇಕೆ ಅಗ್ಗದ ಸುಣ್ಣ ಬಳಿಯಬೇಕು? ಎಂಬ ಅನಿಸಿಕೆಯೂ ಸಾಮಾನ್ಯವೇ. ಹಾಗಿದ್ದರೆ ಕಡೇ ಪಕ್ಷ ಎಲ್ಲಿ ನಮ್ಮ ಗಮನ ಹೆಚ್ಚು ಹರಿಯುವುದಿಲ್ಲವೋ, ಎಲ್ಲಿ ನಾವು “ವಾಷಬಲ್‌’ ಅಂದರೆ ನೀರು ಹಾಕಿ ತೊಳೆಯುವ ಸಾಧ್ಯತೆ ಇರುವುದಿಲ್ಲವೋ ಅಲ್ಲಿ ಸುಣ್ಣವನ್ನು ಬಳಿಯಬಹುದು. ಸಾಮಾನ್ಯವಾಗಿ ಸೀಲಿಂಗ್‌ ಅಂದರೆ, ಸೂರಿನ ಕೆಳಗೆ ಸುಣ್ಣ ಬಳಿದರೆ ಯಾವ ತೊಂದರೆಯೂ ಇರುವುದಿಲ್ಲ! ಈ ಪ್ರದೇಶದಲ್ಲಿ ಹೆಚ್ಚು ಬೆಳಕು ಪ್ರತಿಫ‌ಲಿಸುವ ಗುಣ ಹೊಂದಿರುವ ಸುಣ್ಣ ಬಳಿದರೆ ಮನೆ ಫ‌ಳಫ‌ಳ ಹೊಳೆಯುವುದರ ಜೊತೆಗೆ ನೈಸರ್ಗಿಕವಾಗಿಯೇ ಕ್ರಿಮಿನಿರೋಧಕ ಗುಣವನ್ನೂ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ಆಧಾರಿತ ಬಣ್ಣಗಳಿಗೇನೇ ಕ್ರಿಮಿನಾಶಕಗಳನ್ನು ಅಂದರೆ ವಿಷಕಾರಿ ರಾಸಾಯನಿಕಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತಿದೆ. ಆದರೆ ಇವೆಲ್ಲ ಮಾನವರಿಗೂ ಹಾನಿಕಾರಕವೇ! ಆದುದರಿಂದ ನಿಮಗೆ ಆರೋಗ್ಯಕರ ಮನೆ ಬೇಕೆಂದರೆ ಕಡೆಪಕ್ಷ ಸೂರಿನ ಕೆಳಗಾದರೂ ಸುಣ್ಣ ಬಳಿಯಿರಿ.

ಸುಣ್ಣದ ಇತರೆ ವಿಶೇಷತೆಗಳು
ಮನೆಯನ್ನು ನೀರು ನಿರೋಧಕ ಮಾಡುವ ಹಾಗೂ ಗೋಡೆಗೆ ತೊಳೆಯಬಹುದಾದ ಬಣ್ಣಗಳನ್ನು ಬಳಸುವ ಭರಾಟೆಯಲ್ಲಿ ನಾವು ನಮ್ಮ ಮನೆಗಳನ್ನು ನಿರ್ಜೀವಗೊಳಿಸುತ್ತಿದ್ದೇವೆ. ಸುಣ್ಣ ಹೊಡೆದ ಗೋಡೆಗಳಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು- ನಮ್ಮ ಚರ್ಮದಲ್ಲಿ ಇರುವಂತೆಯೇ ಇದ್ದು, ಇವುಗಳ ಮೂಲಕ ಗೋಡೆಗಳು ಉಸಿರಾಡುತ್ತವೆ. ಇದರಿಂದಾಗಿ ಮನೆಯೊಳಗೆ ಶೇಖರವಾಗುವ ತೇವಾಂಶ ಇತ್ಯಾದಿ ಗೋಡೆಗಳ ಮೂಲಕ, ಒಳಗೂ ಹೊರಗೂ ಹರಿಯಲು ಸಹಾಯಕಾರಿ. ಈ ನೈಸರ್ಗಿಕ ಕ್ರಿಯೆಗೆ ತಡೆಯಾದರೆ ಮನೆಯ ಒಳಾಂಗಣ ವಾತಾವರಣ ಆರೋಗ್ಯಕರವಾಗಿರುವುದಿಲ್ಲ. ಈ ರೀತಿಯಲ್ಲಿ ತೇವಾಂಶ ಸೂರಿನಲ್ಲಿ ಹೆಚ್ಚಾದರೆ, ಆರ್‌.ಸಿ.ಸಿ ಯಲ್ಲಿ ಅಳವಡಿಸಿರುವ ಸರಳುಗಳು ಸುಲಭದಲ್ಲಿ ತುಕ್ಕು ಹಿಡಿಯಬಹುದು. ಅದೇ ರೀತಿ ಗೋಡೆಗಳಲ್ಲಿ ತೇವಾಂಶ ಹೆಚ್ಚಾದರೂ ಪ್ಲಾಸ್ಟಿಕ್‌ ಎಮಲÒನ್‌ಗಳು ಅದನ್ನು ಮುಚ್ಚಿಡುವುದರಿಂದ ನಮಗೆ ಬಿರುಕುಗಳ ಇರುವಿಕೆ, ಗೋಡೆ ತೇವ ಆಗಿರುವುದರ ಬಗ್ಗೆ ಗೊತ್ತೇ ಆಗುವುದಿಲ್ಲ. ಆದರೆ, ಸುಣ್ಣ ಬಳಿದರೆ ಹಾಗಾಗುವುದಿಲ್ಲ, ಎಲ್ಲಾದರೂ ಸೋರುವುದು, ತೇವಾಂಶ ಹೆಚ್ಚಾಗಿದ್ದರೆ, ಕಂಬಿಗಳು ತುಕ್ಕು ಹಿಡಿಯುವ ಮೊದಲೇ ನಮಗೆ ಸೂಚನೆಯನ್ನು ನೀಡುತ್ತದೆ!

Advertisement

ಆಹಾರ, ಉಡುಗೆ ತೊಡುಗೆಗಳಲ್ಲಿ ನೈಸರ್ಗಿಕ ವಸ್ತುಗಳನ್ನು ಬಯಸುವವರು ಮನೆಗೊಂದಷ್ಟು ಸುಣ್ಣ ಬಳಿದು ನೋಡಿ!

ಸುಣ್ಣಕ್ಕೆ ಬಣ್ಣ ಕಟ್ಟುವುದು
ಸುಣ್ಣ ನೈಸರ್ಗಿವಾಗೇ ಬೆಳ್ಳಗಿದ್ದರೂ, ಕೆಲವೊಮ್ಮೆ ಮಣ್ಣು ಮತ್ತೂಂದು ಬೆರಕೆ ಆಗಿದ್ದರೆ ಸ್ವಲ್ಪ ಮಬ್ಟಾಗಿ ಕಾಣುವುದುಂಟು. ಸುಣ್ಣದ ಗೋಡೆಗೆ ವಿಶೇಷ ಮೆರಗು ನೀಡಲು ಬಿಳಿ ಬಟ್ಟೆಗೆ ಹಾಕುವ ನೀಲಿಯನ್ನು ಬೆರೆಸಿ ಮತ್ತಷ್ಟು ಮಿಂಚುವಂತೆ ಮಾಡಬಹುದು. ಇತರೆ ಬಣ್ಣಗಳು ಬೇಕೆಂದರೆ ಆಯಾ ಬಣ್ಣದ ಪುಡಿಗಳನ್ನು ಬಳಸಬಹುದು. ಈ ಹಿಂದೆ ಜನಪ್ರಿಯವಾಗಿದ್ದ ಕಾವಿ ನೆಲಕ್ಕೆ ಹಾಕುತ್ತಿದ್ದ ರೆಡ್‌ ಆಕ್ಸೆ„ಡ್‌ ಬೆರೆಸಿದರೆ, ಸುಣ್ಣ ತೆಳುಗೆಂಪು- ರೋಸ್‌ ಬಣ್ಣ ಪಡೆಯುತ್ತದೆ. ಅದೇ ರೀತಿಯಲ್ಲಿ “ಗೋಪಿ’ ಎಂಬ ಬಣ್ಣ ಪಡೆಯಲು ತೆಳು ಹಳದಿ ಕಲ್ಲಿನ ಪುಡಿಯೂ ಲಭ್ಯ. ಈ ಎಲ್ಲ ಬಣ್ಣಗಳೂ ಸುಣ್ಣದೊಂದಿಗೆ ಸೇರಿದಾಗ ತೆಳು ಬಣ್ಣಗಳೇ ಅಗಿ, ಗೋಡೆಯ ಪ್ರತಿಫ‌ಲನ ಶಕ್ತಿ ಕುಂಠಿತವಾಗುವುದಿಲ್ಲ. ಸುಣ್ಣಕ್ಕೆ ಆ ಒಂದು ವಿಶೇಷತೆ ಇರುತ್ತದೆ, ಅದು ಯಾವುದೇ ಪ್ಲಾಸ್ಟಿಕ್‌ ಎಮಲÒನ್‌ಗಿಂತ ಹೆಚ್ಚು ರಿಫ್ಲೆಕ್ಟಿಂಗ್‌ ಗುಣ ಹೊಂದಿದ್ದು, ಮನೆಯಲ್ಲಿ ನೈಸರ್ಗಿಕ ಬೆಳಕು ಹೆಚ್ಚಿಸುವುದರಲ್ಲಿ ಸಹಕಾರಿ.

ಹೆಚ್ಚಿನ ಮಾಹಿತಿಗೆ ಫೋನ್‌ 9844132826

 -ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next