Advertisement

ಪರಿಹಾರಕ್ಕೆ ಕೈ ಮುಗಿದ ಅನ್ನದಾತ

12:49 PM Nov 19, 2018 | |

ವಿಜಯಪುರ: ಹಿಂಗ್‌ ಬಂದ್‌ ಹಂಗ ಹೊಕ್ಕೀರಿ, ಪರಿಹಾರ ಕೊಡಸ್ತೀವಿ ಅಂತೀರಿ, ಏನೂ ಕೊಡದ ಕೈ ಬೀಸಿ ಹೊಕ್ಕೀರಿ, ಮಳಿ ಇಲ್ದಂಗಾಗಿ ಬೆಳಿ ಒಣಗಿದಾಗ ಮತ್ತ ಬಂದ ಅದನ್ನ ಹೇಳತೀರಿ… ಹಿಂಗಾದ್ರ ಭೂಮೀನ ನಂಬಿರೋ ಮಣ್ಣಿನ ಮಕ್ಕಳು ಬದುಕೋದಾದ್ರೂ ಹೆಂಗ್‌… ಅನ್ನ ಹಾಕುವ ಕೈ ಪರಿಹಾರಕ್ಕ ಕೈ ಚಾಚುಹಂಗ್‌ ಮಾಡಬ್ಯಾಡ್ರಿ… ನಿಮ್ಮ ಕೈ ಮುಗೀತಿನಿ…

Advertisement

ಜಿಲ್ಲೆಯ ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡ ಹಾಗೂ ಜಿಲ್ಲೆಯ ಅಧಿಕಾರಿಗಳ ಎದುರು ಭೀಕರ ಬರದಿಂದ ತತ್ತರಿಸಿರುವ ರೈತರು ಅಂಗಲಾಚಿ ಬೇಡಿದರು. ತರಾತುರಿ ಮಾಡಿಕೊಂತ ಬಂದು, ದಾರಿ ಮ್ಯಾಗಿನ ಹೊಲದಾಗ ನಿಂತ ಒಂದೆರಡ ಹೊಲದಾಗ ಹೋಗಿ ಫೋಟೋ ತೆಗೆಸಕೊಂಡು ಹೊಕ್ಕಾರ ಬಿಟ್ರ ಮತ್ತೇನೂ ಆಗಿಲ್ಲ. ಹಿಂದ ಬಂದ್‌ ಹಂಗ್‌ ಹೋಕ್ಕಾರ, ರೈತರ ಮ್ಯಾಲ ಯಾರದೂ ದರಕಾರ ಇಲ್ಲದಂಗಾಗೇತಿ ಎಂದು ರೈತರು ದೂರಿದರು.

ಡಾ| ಮಹೇಶ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಹೊನಗನಹಳ್ಳಿ, ಜುಮನಾಳ ಇತರೆ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾದಾಗ ರೈತರು ಭೀಕರ ಬರದಿಂದ ಆಗಿರುವ ಅನಾಹುತವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. 

ಒಂದ ಎಕರೆ ಬೆಳೆ ಬೆಳಿಬೇಕಾದ್ರ 25-30 ಸಾವಿರ ರೂ. ಖರ್ಚ ಮಾಡಬೇಕು. ಬಿತ್ತಿದ ಮ್ಯಾಲ ಮಳಿ ಆಗ್ಲಿಲ್ಲಂದ್ರ ಹಾಕಿ ಎಲ್ಲ ಬಂಡವಾಳ ಲಾಸ್‌ ಆಕೈತಿ. ಹತ್ತ ವರ್ಷಾತು ಇದೇ ಗೋಳಾಗೇತಿ. ಆರ್‌ ತಿಂಗಳಿಗೊಮ್ಮೆ ಹತ್ತಾರ ಕಾರು ಏರಿ ಹಿಂಗ್‌ ಬಂದ ಫೋಟೋ ತೆಗೆಸಕೊಂಡ ಹೊಕ್ಕೀರಿ, ಮತ್ತ ಹೊಳ್ಳಿ ಬಂದು ಎಷ್ಟ ರೈತರಿಗೆ ಪರಿಹಾರ ಕೊಟ್ಟಿರಿ. ದಯವಿಟ್ಟು ನಿಮ್ಮ ಕೈ ಮುಗಿತೀವಿ ಮಣ್ಣ ನಂಬಿ ಬದುಕುವ ನಮ್ಮಂಥ ರೈತರನ್ನ ಕೈ ಬಿಡಬ್ಯಾಡ್ರಿ ಎಂದು ಗೋಗರೆದರು.

ಹೊನಗನಹಳ್ಳಿ ರೈತರ ಹೊಲಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಿ ಮರಳಿ ಹೊರಟಿದ್ದ ಅಧಿಕಾರಿಗಳನ್ನು ತಡೆದು ಕೈ ಮುಗಿದು ನಿಂತ ರೈತ ಚಂದ್ರಪ್ಪ ಸೀತಿಮನಿ, ಆರ ತಿಂಗಳ ಹಿಂದ ಹಿಂಗ್‌ ಬಂದ ಬೆಳಿ ಒಣಗಿದ್ದ ನೋಡಿ ಹೋಗಿದ್ರಿ. ಎಷ್ಟ ರೈತರಿಗೆ ಪರಿಹಾರ ಕೊಟ್ರಿ, ಸರ್ಕಾರ ಸಾಲ ಮನ್ನಾ ಮಾಡ್ತೀನಿ ಅಂತಾ ಹೇಳಕೊಂಡ ಕಾಲ ಕಳೀತೈತಿ. ನೂರೆಂಟು ಷರತ್‌ ಹಾಕ್ತೀರೋದ್ರಿಂದ ರೈತರಿಗೆ ನಯಾಪೈಸೆ ಲಾಭ ಆಗಿಲ್ಲ. ಇನ್ನಾದ್ರೂ ಅನ್ನ ಕೊಡೊ ರೈತರನ್ನ ಕೈ ಚಾಚಿ ನಿಲ್ಲುವಂಗ ಮಾಡಬ್ಯಾಡ್ರಿ ಎಂದು ಅಂಗಲಾಚಿದರು.

Advertisement

ಒಂದ ಎಕರೆ ಬೆಳಿ ಬೆಳಿಬೇಕಾದ್ರ ಬೀಜ, ಗೊಬ್ಬರ, ಬಿತ್ತನೆ ಬಾಡಿಗೆ, ಕೂಲಿ ಅಂತೆಲ್ಲ 30 ಸಾವಿರ ಖರ್ಚ ಮಾಡಿ ತೊಗರಿ, ಸೂರ್ಯಕಾಂತಿ ಬಿತ್ತೀವಿ, ಮಳಿ ಕೈ ಕೊಟ್ಟ ಎಲ್ಲ ಬೆಳಿ ಒಣಗಿ ನಷ್ಟ ಆಗೇತಿ. ಮಣ್ಣ ಬಿಟ್ಟರ ನಮಗ ಆಸರ ಏನೂ ಇಲ್ಲ. ಸೋಸೈಟಿ, ಬ್ಯಾಂಕ್‌ನ್ಯಾಗ ಲಕ್ಷಾಂತರ ರೂ. ಸಾಲ ಮಾಡಿಕೊಂಡೀವಿ. ಅಧ್ಯಯನ ಮಾಡ್ತೀವಿ, ಸಮೀಕ್ಷೆ ಮಾಡ್ತೀವಿ ಅಂತ ಹಿಂಗ್‌ ಬಂದ ಹಂಗ್‌ ಹೋಕ್ಕಿರಿ, ಮಾತನ್ಯಾಗ ಕಾಲ ಕಳಿಬ್ಯಾಡ್ರಿ, ರೈತರಿಗೆ ಏನಾದ್ರೂ ಮಾಡಿ ಪುಣ್ಯ ಕಟ್ಟಿಕೊಳ್ರಿ ಎಂದು ಕೋರಿದರು.

ಸೂರ್ಯಕಾಂತಿ ಬಿತ್ತಾಕ 25 ಸಾವಿರ ರೂ.ಖರ್ಚಾಗೇತಿ, ಮಳಿ ಇಲ್ದಂಗಾಗಿ ಬೆಳಿ ಒಣಗಿ ಹೋಗೇತಿ. ಹಿಂಗಾ ಆದ್ರ ರೈತ ಬಾಳೇ ಮುರಾಬಟ್ಟಿ ಆಕೈತಿ. ಸರ್ಕಾರ ಏನಾದ್ರು ಮಾಡಿ ಬಿತ್ತಾಕ ಮಾಡಿರೋಷ್ಟು ಖರ್ಚಾದ್ರೂ ಕೊಡಲಿ.
 ಮಲ್ಲವ್ವ ಶಳ್ಳಿಕೇರಿ, ಸಂತ್ರಸ್ತ ರೈತ ಮಹಿಳೆ, ಹೊನಗನಹಳ್ಳಿ

ಮುಂದಿನ ಬಿತ್ತನೆಗೆ ಹೊಲಕ್ಕ ಗೊಬ್ಬರಾದ್ರೂ ಆಗಲೆಂತ ಒಣಗಿದ ಬೆಳಿ ಕುರಿ ಮೇಸಾಕ ಕೊಟ್ರೂ ಬಾಡಿ ನಿಂತ ಹಳದಿ ಬೆಳಿ ಕಡಿ ಕುರಿ ಮುಖ ಮಾಡವಲು. ಎಕರೆಗೆ 300-400 ರೂ. ಕೊಡತೀವಿ ಹೊಲ ಮೇಯಿಸ್ಕೊಂಡು ಹೋಗ್ರೋ ಅಂದ್ರೂ ಕುರಿಗಾರರು ಹೊಲಕ್ಕ ಬರಾಕ ತಯಾರಿಲ್ಲ. ರೈತರಿಗೆ ಬಂದಿರೋ ಸ್ಥಿತಿ ವೈರಿಗೂ ಬ್ಯಾಡ್ರಿ. 
ರಾಜಕುಮಾರ ಶಳ್ಳಿಕೇರಿ, ಸಂತ್ರಸ್ತ ರೈತ, ಹೊನಗನಹಳ್ಳಿ

ಆರೇಳು ವರ್ಷ ಆತ್ರಿ ಹಿಂಗ ಆಗೇತಿ, ಭೂಮಿ ತಾಯಿ ನಂಬಿರೋ ನಮಗ ವರುಣದೇವ ಕಣ್ಣ ಬಿಡಲಾರದಕ್ಕ ಕಂಗಾಲಾಗಿದ್ದೇವೆ. ಸರ್ಕಾರ ಹೆಂಗಾದ್ರೂ ನಮ್ಮ ನೆರವಿಗೆ ಬರೂವಂಗ ಹೇಳಿ, ಬೆಳಿ ನಷ್ಟ ಆಗಿರೋದಕ್ಕ ಪರಿಹಾರ ಕೊಡಸಿ ಪುಣ್ಯ ಕಟ್ಟಿಕೊಳಿ.
 ರಾವುತಪ್ಪ ಗಾಣಿಗೇರ, ಸವನಳ್ಳಿ

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next