Advertisement

Sirsi: ಸಮಾಜದ ಸಮೃದ್ದಿಗೆ ವೇದಾಧ್ಯಯನ ಯಜ್ಞ ಹೆಚ್ಚಳ ಆಗಬೇಕು: ಸ್ವರ್ಣವಲ್ಲೀ

02:55 PM Jan 13, 2024 | Team Udayavani |

ಶಿರಸಿ: ಸಮಾಜದ ಸಮೃದ್ದಿಗೆ ವೇದಾಧ್ಯಯನ, ವೇದಗಳಿಗೆ ಪೂರಕವಾದ ಯಜ್ಞ ಅನುಷ್ಠಾನ ಹೆಚ್ಚಬೇಕು ಎಂದು‌ ಸೋಂದಾ‌ ಸ್ವರ್ಣವಲ್ಲೀ‌‌ ಮಹಾ‌ಸಂಸ್ಥಾನದ‌ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾ‌‌ಸ್ವಾಮೀಜಿ‌ ಹೇಳಿದರು.

Advertisement

ಜ.13ರ ಶನಿವಾರ ತಾಲೂಕಿನ ಸ್ವರ್ಣವಲ್ಲೀಯಲ್ಲಿ ಶ್ರೀರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಮೂರು ದಿನಗಳ ದಕ್ಷಿಣ ಭಾರತ ಕ್ಷೇತ್ರೀಯ ವೇದ ಸಮ್ಮೇಳನದ‌ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.

ಪೂರ್ವಜರು ವೇದ ಉಳಿಸಿಕೊಟ್ಟಿದ್ದರಿಂದ ಇಂದಿನ ತನಕವೂ ಆಹಾರ ಸಮಸ್ಯೆ ಆಗಲಿಲ್ಲ. ವೇದಕ್ಕೂ ಯಜ್ಞಕ್ಕೂ, ಮಳೆಗೂ, ಆಹಾರಕ್ಕೂ ನಿಕಟ ಸಂಬಂಧವಿದೆ. ವೇದ ಮತ್ತು ಯಜ್ಞ ಸಮೃದ್ದವಾಗಿ ಆಚರಣೆ ಆಗಿದ್ದರೆ ಆಹಾರವೂ ಸಮೃದ್ಧ, ಬದುಕಿನಲ್ಲಿ‌ ನೆಮ್ಮದಿ‌ ಲಭಿಸುತ್ತದೆ. ಈಚೆಗೆ ವೇದ ಅಧ್ಯಯನ, ಯಜ್ಞಗಳ ಕೊರತೆಗಳ ಪರಿಣಾಮ ಕಾಡುತ್ತಿದೆ. ಯಜ್ಞಗಳ ಕೊರತೆಯಿಂದ‌ ಮಳೆಯ ಕೊರತೆಗೂ ಕಾರಣವಾಗುತ್ತಿದೆ. ಆಹಾರ ಉತ್ಪಾದನೆಯಲ್ಲಿ ಅಪಾಯ ಆಗುತ್ತಿದೆ. ಭೂಮಿ ಕೂಡ ಬರಡಾಗುತ್ತಿದೆ ಎಂದು ಆತಂಕಿಸಿದರು.

ವೇದಗಳ ಅಧ್ಯಯನದಿಂದ ಏನು ಮಹತ್ವ ಎನ್ನುವ ಕುರಿತು ಗೀತೆ ಕೂಡ‌ ಹೇಳುತ್ತದೆ. ವೇದ ತಿಳಿದು ಯಜ್ಞ ಮಾಡಬೇಕು ಎಂದ ಶ್ರೀಗಳು, ವೇದಾ ಅಧ್ಯಯನ‌ ನಡೆಸುವವರಿಗೆ ಉತ್ತೇಜಿಸಲು‌‌ ವೇದ ಸಮ್ಮೇಳನದ‌ ಮೂಲ ಆಶಯ. ವೇದಗಳ ಅಧ್ಯಯನ ಜೊತೆ ವೇದ ಶಾಸ್ತ್ರ ಪಂಡಿತರ ಕೊರತೆ ಇದೆ ಎಂದು ಹೇಳಿದರು.

ಮಂತ್ರಗಳ ಬಳಕೆ ಜೊತೆಗೆ ಅದರ ಅರ್ಥ ಜ್ಞಾನ ಕೂಡ ಇಟ್ಟುಕೊಳ್ಳಬೇಕು. ವೇದಗಳ ರಕ್ಷಣೆಗೆ ಹಿಂದಿನವರು ಮಾಡಿದ ತಪಸ್ಸು ಮನನ ಮಾಡಿಕೊಳ್ಳಬೇಕು. ವೇದ ಉಳಿಸಲು‌ ಮುಂದಾದರೆ ಪರಂಪರೆಯ ಸಂರಕ್ಷಣೆ ಆಗುತ್ತದೆ ಎಂದರು.

Advertisement

ಕೂಡಲಿ ‌ಮಠದ ಶ್ರೀಅಭಿನವ ಶಂಕರ ಭಾರತೀ ಮಹಾಸ್ವಾಮಿ ಮಾತನಾಡಿ, ವೇದ ವಿರೋಧಿ ಕಾನೂನು ಇಟ್ಟುಕೊಂಡು ವೇದಗಳ ಅಧ್ಯಯನ ಮಾಡುವುದು ಹೇಗೆ ಎಂಬುದು ಚರ್ಚೆ ಮಾಡಬೇಕಾಗಿದೆ. ಸರಕಾರದ ನೆರವು ಪಡೆದರೆ ವೇದಗಳ‌ ಮೇಲೆ‌ ಹೇರಿಕೆ ಆಗುತ್ತಿದೆಯಾ ಎಂಬ ಪ್ರಶ್ನೆ ಕೇಳಬೇಕಾಗಿದೆ. ಪರಂಪರೆಯ ಉಳಿವಿಗೆ ಸರಕಾರದ ಅನುದಾನದ ಅಗತ್ಯ ಇದೆಯಾ? ಧರ್ಮದ ಆಚರಣೆಗೆ ಸಮಾಜದ ಕೊಡು‌ಕೊಳ್ಳುವಿಕೆ ಆಗಬೇಕಿದೆ ಎಂದರು.

ಉಜ್ಜಯನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೋ. ಪ್ರಫುಲಕುಮಾರ ಮಿಶ್ರ ಮಾತನಾಡಿ, ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ವೇದ ಅಧ್ಯಯನಕ್ಕೆ ತೊಂದರೆ ಆದರೂ ಆಚಾರ್ಯರ ಪ್ರಭಾವದಿಂದ, ಮಠ ಮಂದಿರಗಳಿಂದ, ಸರಕಾರದ ಸ್ಪಂದನೆಯಿಂದ ಉಳಿಸುವ ಕಾರ್ಯ ಮಾಡಲಾಗಿದೆ. ವೇದಗಳ ರಕ್ಷಣೆ ಎಲ್ಲರ ಜವಬ್ದಾರಿ‌ ಎಂದರು.

ಉಜ್ಜಯನಿಯ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಕಾರ್ಯದರ್ಶಿ ಪ್ರೋ. ವಿರೂಪಾಕ್ಷ‌ ಜಡ್ಡಿಪಾಲ ಮಾತನಾಡಿ,‌ ವೇದ ಶಾಸ್ತ್ರ ಗಳಿಗೆ ಬಲ‌ ಕೊಡುವದೇ ಪ್ರತಿಷ್ಠಾನದ ಆಶಯ, ಉದ್ದೇಶ. ಮಣಿಪುರದಲ್ಲೂ,  ಭೂಕಂಪದ ಅನೇಕ‌ ಸ್ಥಳದಲ್ಲೀಯೂ, ಗೋವಾದಲ್ಲೂ  ವೇದ ಅಧ್ಯಯನ ಮಾಡಿಸುತ್ತಿದ್ದೇವೆ. ಸರಕಾರಿ ವ್ಯವಸ್ಥೆ ಇಟ್ಟುಕೊಂಡು ವೇದ ಅಧ್ಯಯನ ಮಾಡಿಸುತ್ತಿದ್ದೇವೆ. ಸಣ್ಣ ಸಣ್ಣ ವೇದಾಧ್ಯಯನ ಕೇಂದ್ರಗಳಿಗೂ‌ ಮಾನ್ಯತೆ ಸರಕಾರದಿಂದ ಸಿಗಬೇಕು‌. ಆ ಕೆಲಸ ಮಾಡಲಾಗುತ್ತಿದೆ ಎಂದರು.

ದಿಕ್ಸೂಚಿ ಭಾಷಣ‌ ಮಾಡಿದ ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ‌ ಕುಲಪತಿ ಪ್ರೋ.ಕಾ.ಈ.ದೇವನಾಥನ್ ಮಾತನಾಡಿ, ವೇದಾಧ್ಯಯನ, ಶಾಸ್ತ್ರ ಅಧ್ಯಯನ ಎರಡೂ‌ ಮಾಡಬೇಕು. ವೇದ ಅಧ್ಯಯನ ‌ಮಾಡುವವರ ಕೊರತೆ ಇದೆ. ಸಾಮವೇದ, ಯಜುರ್ವೇದ, ಅಥರ್ವ ವೇದ ಎಲ್ಲವನ್ನೂ ಓದಬೇಕು. ನಾಲ್ಕೂ ವೇದಗಳ ಅಧ್ಯಯನ  ಒಂದೇ ಕಡೆಗೆ ಆಸಕ್ತ ಅಧ್ಯಯನಾರ್ಥಿಗಳಿಗೆ ಸಿಗಬೇಕು ಎಂದರು.

ಧಾತ್ರೀ ಫೌಂಡೇಶನ್ ನ ಶ್ರೀನಿವಾಸ ಧಾತ್ರಿ‌ ಮಾತನಾಡಿದರು.

ಎಂ.ಜಿ.ಗಡಿಮನೆ ಸ್ವಾಗತಿಸಿ, ಜಿ.ವಿ.ಹೆಗಡೆ, ಶಿವರಾಮ ಭಟ್ಟ‌ ಫಲ‌ ಸಮರ್ಪಣೆ‌ ಮಾಡಿದರು. ಇದೇ‌ ವೇಳೆ ಬೆಂಗಳೂರಿನ ವೇ.ಬ್ರ.ಎಸ್.ಗಣೇಶ ಗಣಪಾಠಿ, ವಿಜಯವಾಡದ ವೇ.ಬ್ರ.ಸುಂದರಾಮ ಶ್ರೌತಿ  ಅವರನ್ನು ಗೌರವಿಸಲಾಯಿತು.

ಎಂಟು ವರ್ಷಗಳಿಗೂ ಅಧಿಕ ವೇದ ಓದಿದವರಿಗೆ ಪಿಯುಸಿ ತತ್ಸಮಾನ ಪ್ರಮಾಣ‌ ಪತ್ರ ನೀಡಲಾಗುತ್ತದೆ. – ಜಡ್ಡೀಪಾಲ್, ಕಾರ್ಯದರ್ಶಿ, ಮಹರ್ಷಿ ಸಾಂದೀಪನಿ‌ ಪ್ರತಿಷ್ಠಾನ, ಉಜ್ಜಯನಿ

ಪರಂಪರಾಗತ ವೇದಗಳ‌ ಉಳಿವಿಗೆ ನೆರವಾಗಲು ಕಂಪನಿಗಳ ಸಿಎಸ್ಆರ್ ನಿಧಿಯಿಂದಲೂ ನೆರವು ಬಳಸುವಂತೆ ಸರಕಾರ ಆದೇಶ ಮಾಡಬೇಕು. ಆಗ ವೇದ ಸಂಸ್ಕೃತಿಗಳಿಗೆ ಬಲ ಬರಲಿದೆ. – ಕೂಡಲಿ ಶ್ರೀ

ಸೋಮವಾರ ಸಮಾರೋಪ

ಮೂರು ದಿನಗಳ ಕ್ಷೇತ್ರೀಯ ವೇದ ಸಮ್ಮೇಳನ ಸೋಮವಾರ ಸಂಪನ್ನವಾಗಲಿದೆ. ಸ್ವರ್ಣವಲ್ಲೀ ಶ್ರೀಗಳು, ಕೂಡಲಿ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಅನಂತ ಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಪಾಲ್ಗೊಳ್ಳುವರು. ಇದೇ ವೇಳೆ ಬೆಂಗಳೂರಿನ ವೇ.ಬ್ರ. ಕೆ.ಗೋವಿಂದ ಪ್ರಕಾಶ ಘನಪಾಠಿ, ಪುರಿಯ ವೇ.ಬ್ರ. ಕುಂಜಬಿಹಾರೀ ಉಪಾಧ್ಯಾಯ ಅವರನ್ನು ಸಮ್ಮಾನಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next