Advertisement

ತೆರಿಗೆ ಪಾವತಿಗೆ ಬರಲಿದೆ ಆ್ಯಪ್‌

10:13 PM May 10, 2020 | Sriram |

ಕುಂದಾಪುರ: ಕಟ್ಟಡ ತೆರಿಗೆ, ವ್ಯಾಪಾರ ಲೈಸೆನ್ಸ್‌, ನೀರಿನ ಬಿಲ್ಲು ಎಂದು ಪ್ರತಿಯೊಂದಕ್ಕೂ ಇನ್ನು ಪುರಸಭೆಗೆ ಎಡತಾಕಬೇಕಿಲ್ಲ. ಮನೆಯಲ್ಲೇ ಕುಳಿತು ಬಿಲ್‌ ಪಾವತಿಸಬಹುದು. ಪೌರಾಡಳಿತ ಸಂಸ್ಥೆಗಳಲ್ಲಿ ಇಂಥದ್ದೊಂದು ಪ್ರಯತ್ನವನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕುಂದಾಪುರದಲ್ಲಿ ಮಾಡಲಾಗುತ್ತಿದೆ.

Advertisement

ಈವರೆಗೆ ಬಿಎಸ್‌ಎನ್‌ಎಲ್‌, ಮೆಸ್ಕಾಂ ಬಿಲ್‌ ಮೊದಲಾದುವ‌ಕ್ಕೆ ಈ ಅವಕಾಶ ಇತ್ತು. ಪುರಸಭೆ ತೆರಿಗೆ ಪಾವತಿಗೆ ಪುರಸಭೆಗೇ ಹೋಗಬೇಕಿತ್ತು. ಅಲ್ಲಿ ಸಾಲು ನಿಂತು ಪಾವತಿ ಮಾಡಿ ಬರಬೇಕಿತ್ತು. ಈ ಹೊರೆ ಕಡಿಮೆಯಾಗಬೇಕು ಎಂದು ಆ್ಯಪ್‌ ಮಾಡುವ ಯೋಚನೆಗೆ ಮುಂದಾಗಿದೆ ಆಡಳಿತ.

ಆ್ಯಪ್‌
ನೂತನವಾಗಿ ರಚನೆಯಾಗಲಿರುವ ಆ್ಯಪ್‌ ಮೂಲಕ ಸಾರ್ವಜನಿಕರು ಅವರ ಮನೆ ನಂಬರ್‌ ಹಾಕಿದರೆ ಅದರ ತೆರಿಗೆ ಎಷ್ಟೆಂದು ನಮೂದಾಗುತ್ತದೆ. ಅದನ್ನು ಬ್ಯಾಂಕ್‌ ಮೂಲಕ ಪಾವತಿಸಬಹುದು. ಅವರ ಮೊಬೈಲ್‌ಗೆ ಹಣ ಪಾವತಿಗೆ ಬಂದ ಸಂದೇಶಕ್ಕೆ ಪ್ರತ್ಯುತ್ತರ ನೀಡಿದರೆ ಬ್ಯಾಂಕ್‌ನಿಂದ ಪುರಸಭೆಗೆ ಹಣ ಜಮೆಯಾಗುತ್ತದೆ. ಇದರಿಂದಾಗಿ ಮೂರನೆಯ ವ್ಯಕ್ತಿ ವ್ಯವಹಾರ ಮಾಡುವುದು ತಪ್ಪುತ್ತದೆ. ಆಂಡ್ರಾಯಿಡ್‌ ಮೊಬೈಲ್‌ ಇಲ್ಲದವರೂ ಸಂದೇಶಕ್ಕೆ ಪ್ರತಿಕ್ರಿಯಿಸಿ ಹಣ ಪಾವತಿಸಲು ಬೇಕಾಗುವಂತೆ ಆ್ಯಪ್‌ ರೂಪಿಸಲಾಗುತ್ತಿದೆ.

ಅನುಮತಿಗೆ ಪತ್ರ
ಆ್ಯಪ್‌ ಮೂಲಕ ಹಣ ಪಾವತಿ ಮಾಡಬೇಕಾದರೆ ಪುರಸಭೆ ತನ್ನಲ್ಲಿರುವ ದತ್ತಾಂಶಗಳನ್ನು ಆ್ಯಪ್‌ ತಯಾರಿಕಾ ಸಂಸ್ಥೆಗೆ ನೀಡಬೇಕಾಗುತ್ತದೆ. ಈಗಾಗಲೇ ಆ್ಯಪ್‌ ತಯಾರಿಕಾ ಸಂಸ್ಥೆ ಆರ್‌ಬಿಐನಿಂದ ಅನುಮತಿ ಪಡೆದಿದೆ. ಆದರೆ ಪುರಸಭೆ ದತ್ತಾಂಶಗಳನ್ನು ನೀಡಲು ಸರಕಾರದ ಇಲಾಖೆಯಿಂದ ಅನುಮತಿ ಅವಶ್ಯವಿದೆ. ಇದನ್ನು ಪತ್ರಮುಖೇನ ಮಾಡಬೇಕಿದೆ. ದತ್ತಾಂಶಗಳ ಸೋರಿಕೆ ಕುರಿತೂ ಕಳವಳ ಬೇಕಿಲ್ಲ, ಪುರಸಭೆ ವತಿಯಿಂದ ಮನೆ ನಂಬರ್‌ ಹಾಗೂ ಹೆಸರು ಮಾತ್ರ ನೀಡಲಾಗುತ್ತದೆ. ಎಷ್ಟು ತೆರಿಗೆ ಎಂದು ಆ್ಯಪ್‌ ಲೆಕ್ಕ ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ಒಟಿಪಿ ಮೂಲಕ ದಾಖಲಾದ ಮೊಬೈಲ್‌ನಿಂದಲೇ ವ್ಯವಹರಿಸುವಂತೆ ಮಾಡಿದರೆ ಭದ್ರತೆಗೂ ತೊಂದರೆಯಾಗದು. ಅಪವ್ಯಯವೂ ಆಗದು.

ಪಂಚಾಯತ್‌ಗಳಲ್ಲೂ
ಜಿಲ್ಲೆಯ ಎಲ್ಲ ಪಂಚಾಯತ್‌ಗಳಲ್ಲೂ ಈ ವ್ಯವಸ್ಥೆ ಮಾಡಲು ಸಂಸ್ಥೆ ಚಿಂತನೆ ನಡೆಸಿದ್ದು ಇದಕ್ಕಾಗಿ ಜಿ. ಪಂ.ಗೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಕಾಡೂರು ಪಂಚಾಯತ್‌ನಲ್ಲಿ ಈ ರೀತಿಯ ಡಿಜಿಟಲ್‌ ಗ್ರಾ.ಪಂ. ವ್ಯವಸ್ಥೆ ಚಾಲ್ತಿಯಲ್ಲಿದೆ. ರಾಜ್ಯದ ವಿವಿಧ ಪಂ.ಗಳಲ್ಲಿ ಡಿಜಿಟಲ್‌ ಪಾವತಿ ಸೇವೆ ಲಭ್ಯವಿದೆ. ಆದರೆ ಪೌರಾಡಳಿತ ಸಂಸ್ಥೆಗಳ ಪೈಕಿ ಕುಂದಾಪುರ ಪುರಸಭೆಯೇ ಮೊದಲ ಬಾರಿಗೆ ಇಂತಹ ಸೌಲಭ್ಯ ಅಳವಡಿಸಿಕೊಳ್ಳಲು ಮುಂದಾಗಿದೆ.

Advertisement

ಪ್ರಸ್ತಾವನೆ ಇದೆ
ಆ್ಯಪ್‌ ಮೂಲಕ ತೆರಿಗೆ, ಬಿಲ್‌ ಪಾವತಿಗೆ ಅನುಕೂಲ ಮಾಡಿಕೊಡುವ ಯೋಜನೆ ಪ್ರಸ್ತಾವನೆ ಹಂತದಲ್ಲಿದೆ. ಸರಕಾರದಿಂದ ಅನುಮತಿ ದೊರೆತ ಕೂಡಲೇ ಆರಂಭಿಸಲಾಗುವುದು.
-ಗೋಪಾಲಕೃಷ್ಣ ಶೆಟ್ಟಿ
ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next