Advertisement

ಸಂಗೀತಗಾರರಿಗೆ ಕುಂದಗೋಳ ನಾಡಗೇರ ವಾಡೆ ರತಗಂಬಳಿ

12:34 PM Sep 15, 2017 | |

ಕುಂದಗೋಳ: ಪಟ್ಟಣದ ನಾಡಗೇರ ವಾಡೆಯ ವೇದಿಕೆ ಇಂದಿಗೂ ಸಂಗೀತಗಾರರಿಗೆ ರತ್ನಗಂಬಳಿಯಾಗಿದ್ದು, ಇಲ್ಲಿ ಹಾಡಲು ಕಲಾವಿದರು ಹಾತೊರೆಯುತ್ತಾರೆ. ಗುರುವರ್ಯ ಸವಾಯಿ ಗಂಧರ್ವರ ತವರು ನೆಲವಾಗಿರುವುದು ಇದಕ್ಕೆ ಕಾರಣ. ಪ್ರಸ್ತುತ ಸೆ. 15ರಂದು ಸವಾಯಿ ಗಂಧರ್ವ 65ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಅಹೋರಾತ್ರಿ ಸಂಗೀತೋತ್ಸವ ಹಮ್ಮಿಕೊಂಡಿದ್ದು, ವಾಡೆಯ ಇತಿಹಾಸದ ಕಿರುಚಿತ್ರ ಇಲ್ಲಿದೆ. 

Advertisement

ವಾಡೆಯ ಧಣಿಗಳಾಗಿದ್ದ ರಂಗನಗೌಡ್ರ ನಾಡಗೇರ ಅವರು ಸಂಗೀತ ಪ್ರೇಮಿಗಳಾಗಿದ್ದರು. ತಮ್ಮ ವಾಡೆಯಲ್ಲಿ ನಿತ್ಯ ಸಂಗೀತ ಕಛೇರಿ ನಡೆಸುತ್ತ ನೂರಾರು ಕಲಾವಿದರನ್ನು ಪೋಷಿಸುತ್ತಿದ್ದರು. ವಾಡೆಯ ಒಂದು ಭಾಗದಲ್ಲಿ ಹಾಡುತ್ತ ಕುಳಿತ ಬಾಲಕನೊಬ್ಬನ ಸುರೇಲಿ ಕಂಠಕ್ಕೆ ಮನಸೋತು ಅಬ್ದುಲ್‌ ಕರಿಂ ಖಾನರು ಬಾಲಕನಿಗೆ ಸಂಗೀತ ಧಾರೆಯೆರೆದರು.

ಇದಕ್ಕೆ ಧಣಿಗಳು ಆಶ್ರಯ ನೀಡಿದರು. ಆ ಬಾಲಕನೇ ಸಂಗೀತ ಲೋಕದ ಗಾರುಡಿಗ ಗುರುವರ್ಯ ಸವಾಯಿ ಗಂಧರ್ವರಾದರು. ಗಂಧರ್ವರ ಮೂಲ ಹೆಸರು ರಾಮಭಾವು ಗಣೇಶ ಜೋಶಿ. ಇವರು ವಾಡೆಯಲ್ಲಿ ಜೋಯಸಕಿ (ಕಾರಕೂನ) ಕೆಲಸ ಮಾಡುತ್ತಿದ್ದರು. ವಾಡೆಯಲ್ಲಿಯೇ ಇವರಿಗೆ ಸಂಗೀತ ಶಾರದೆ ಒಲಿದಳು.

ಭಾರತ ರತ್ನ ಪಂ| ಭೀಮಸೇನ್‌ ಜೋಶಿ, ಪದ್ಮಭೂಷಣ ವಿದುಷಿ ಡಾ| ಗಂಗೂಬಾಯಿ ಹಾನಗಲ್‌, ಉಸ್ತಾದ್‌ μರೋಜ್‌ದಸ್ತೂರ ಹೀಗೆ ಅನೇಕರನ್ನು ತನ್ನ ಮಡಿಲಲ್ಲಿಟ್ಟುಕೊಂಡು ಜೋಪಾನವಾಗಿಸಿ ಬೆಳಿಸಿ ಸಂಗೀತ ಲೋಕಕ್ಕೆ ಅರ್ಪಿಸಿದ ಕೀರ್ತಿ ಕುಂದಗೋಳ ನಾಡಗೇರ ವಾಡೆಗೆ ಸಲ್ಲುತ್ತದೆ. 

ಶೈಕ್ಷಣಿಕ-ಸಾಮಾಜಿಕ ಕಳಕಳಿ: 4000 ಎಕರೆ ಜಮೀನು ಹೊಂದಿದ್ದ ನಾಡಗೇರ ಧಣಿಗಳು ಕೇವಲ ಸಂಗೀತ ಲೋಕಕಷ್ಟೆಯಲ್ಲದೆ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೂ ಆಶ್ರಯದಾತರಾಗಿ ದಾನ ದತ್ತಿಗಳನ್ನು ನೀಡಿದ್ದರು. ಕುಂದಗೋಳದ ಹರಭಟ್ಟ ಶಿಕ್ಷಣ ಸಂಸ್ಥೆಗೆ 301 ಎಕರೆ, ಉರ್ದು ಶಾಲೆಗೆ 10, ಎಪಿಎಂಸಿಗೆ 24, ಸರ್ಕಾರಿ ಆಸ್ಪತ್ರೆಗೆ 95, ಪೊಲೀಸ್‌ ಸ್ಟೇಶನ್‌ಗೆ 2, ಕೆಇಬಿಗೆ 2, ದತ್ತ ಮಂದಿರಕ್ಕೆ 46, 

Advertisement

ಧಾರವಾಡದ ಕೆ.ಇ. ಬೋರ್ಡ್‌ಗೆ 300, ಜನತಾ ಶಿಕ್ಷಣ ಸಂಸ್ಥೆ(ಜೆ.ಎಸ್‌.ಎಸ್‌)ಗೆ 300 ಹಾಗೂ ಕರ್ನಾಟಕ ಲಿಬರಲ್‌ ಎಜುಕೇಶನ್‌ ಸೊಸೈಟಿಗೆ 100, ನ್ಯೂ ಎಜುಕೇಶನ್‌ ಸೊಸೈಟಿಗೆ 18 ಎಕರೆ ಭೂಮಿ ದಾನ ಮಾಡಿ ಶಿಕ್ಷಣ-ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಂತರ ಸುಮಾರು 2500 ಎಕರೆಯಷ್ಟು ಜಮೀನನ್ನು ರೈತರಿಗೆ ಸ್ವತಃ ತಾವೇ ಸರ್ಕಾರಿ ಶುಲ್ಕ ಭರಿಸಿ ಅವರ ಹೆಸರಿಗೆ ಮಾಡಿಕೊಟ್ಟಿದ್ದಾರೆ. 

ವಾಡೆಯ ಮನೆತನಕ್ಕೆ ಈಗ 85 ಎಕರೆ ಜಮೀನಿದೆ ಎಂದು ಈಗಿನ ವಾಡೆಯ ಧಣಿ ಅರ್ಜುನ ನಾಡಗೇರ ಹೇಳುತ್ತಾರೆ. ಕುಂದಗೋಳದ ಪ್ರವೇಶ ರಸ್ತೆಗೆ ಸವಾಯಿ ಗಂಧರ್ವರ ದ್ವಾರಬಾಗಿಲು (ಕಮಾನು) ನಿರ್ಮಿಸಬೇಕು. ದಾನ ದತ್ತಿಗಳ ಮೂಲಕ ಸಮಾಜೋದ್ಧಾರಕ್ಕೆ ಶ್ರಮಿಸಿದ ಶ್ರೀಮಂತ ನಾನಾಸಾಹೇಬ ನಾಡಗೇರ ಅವರ ಹೆಸರನ್ನು ಪಟ್ಟಣದ ಎಪಿಎಂಸಿಗೆ ನಾಮಕರಣ ಮಾಡಬೇಕು. 

2000ರಲ್ಲಿ ಶ್ರೀಮಂತ ನಾನಾಸಾಹೇಬ ನಾಡಗೇರ ಸ್ಮೃತಿ ಪ್ರತಿಷ್ಠಾನ ಮಾಡಿ ಅದರ ಮೂಲಕ ಹಿಂದಿನಂತೆ ನಿರಂತರವಾಗಿ ಸಂಗಿತೋತ್ಸವ ಕಾರ್ಯಕ್ರಮ ಮಾಡುತ್ತ ಬಂದಿದ್ದು, ಸರ್ಕಾರ ಈ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಿ ಸಂಗೀತ ಲೋಕ ಬೆಳೆಸಿ ಪ್ರೋತ್ಸಾಹ ನೀಡಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಅರ್ಜುನ ನಾಡಗೇರ ತಮ್ಮ ಮನದಾಳದ ಮಾತನ್ನು “ಉದಯವಾಣಿ’ ಜತೆ ಹಂಚಿಕೊಂಡರು. 

ಸೆ.15ರಂದು ನಡೆಯುವ ಅಹೋರಾತ್ರಿ ಸಂಗೀತೋತ್ಸವದಲ್ಲಿ ವಿವಿಧ ರಾಜ್ಯಗಳಿಂದ ಸಂಗೀತ ಕಲಾವಿದರು ಆಗಮಿಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸವಾಯಿ ಗಂಧರ್ವರ ಸ್ಮರಣಾರ್ಥ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಎಲೆಮರೆ ಕಾಯಿಯಂತಿರುವ ಹಿರಿಯ ಸಂಗೀತಗಾರರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಇಲ್ಲಿನ ಪರಂಪರೆಯಾಗಿದೆ. 

* „ಬಸವರಾಜ ಗುಡ್ಡದಕೇರಿ

Advertisement

Udayavani is now on Telegram. Click here to join our channel and stay updated with the latest news.

Next