Advertisement

ಮೊದಲ ಬಾರಿಗೆ “ಮಕ್ಕಳ ಬಜೆಟ್‌’

09:46 PM Mar 05, 2020 | Lakshmi GovindaRaj |

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು “ಮಕ್ಕಳ’ ಆಯವ್ಯಯ ಮಂಡಿಸಿದ್ದಾರೆ. ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿ ಬಜೆಟ್‌ನಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ. ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಮೊದಲ ಬಾರಿಗೆ ಮಕ್ಕಳ ಬಜೆಟ್‌ ಮಂಡಿಸಿದ್ದು,

Advertisement

ಒಟ್ಟಾರೆ ಬಜೆಟ್‌ನ ಶೇ.15.28ರಷ್ಟು ಹಣವನ್ನು ಮಕ್ಕಳ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಮಹಿಳೆಯರ ಕಲ್ಯಾಣಕ್ಕೂ ಬಜೆಟ್‌ನಲ್ಲಿ ವಿಶೇಷ ಗಮನ ಹರಿಸಿದ್ದು, 953 ಕಾರ್ಯಕ್ರಮಗಳಿಗಾಗಿ 37,783 ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದು ಒಟ್ಟಾರೆ ಆಯವ್ಯಯ ಗಾತ್ರದ ಶೇ.15.88ರಷ್ಟಿದೆ. 13 ವರ್ಷಗಳಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಹಾಗೂ ಅದಕ್ಕೆ ಮೀಸಲಿಟ್ಟ ಅನುದಾನದಲ್ಲಿ ಗಣನೀಯ ಹೆಚ್ಚಳವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಶೇ.31.16ರಷ್ಟು ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಮೀಸಲಿಟ್ಟಿರುವುದೇ ವಿಶೇಷ.

“ಮಹಿಳಾ ಸುರಕ್ಷತಾ ಪೋರ್ಟಲ್‌’ ಆರಂಭ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಸುಧಾರಣಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ತಯಾರಿಸಲು 5 ಕೋಟಿ ರೂ.ಮೀಸಲಿಡಲಾಗಿದೆ. ಸಮಾಲೋಚನಾ ಕೇಂದ್ರಗಳು, ವಿಶೇಷ ಚಿಕಿತ್ಸಾ ಘಟಕಗಳು, ಆಶ್ರಯ ಗೃಹಗಳು, ಉದ್ಯೋಗಸ್ಥ ಮಹಿಳೆ ಯರ ವಸತಿ ನಿಲಯಗಳು ಸೇರಿ ಎಲ್ಲ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಮಹಿಳೆಯರಿಗೆ ತಲುಪಿಸಲು “ಮಹಿಳಾ ಸುರಕ್ಷತಾ ಪೋರ್ಟಲ್‌’ ಆರಂಭಿಸಲು ಮುಂದಾಗಿದೆ.

ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ “ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರ’ಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ 20 ಲಕ್ಷ ರೂ.ವರೆಗೆ ಬಡ್ಡಿ ರಹಿತ ಕಿರು ಸಾಲ ಸೌಲಭ್ಯ ನೀಡಲು 20 ಕೋಟಿ ರೂ. ಅನುದಾನ ಇಡಲಾಗಿದೆ. ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಲ್ಲಿ ಅವಶ್ಯಕತೆಗನು ಸಾರ ಖರೀದಿಸಲು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ರಾಜ್ಯಾದ್ಯಂತ ಇರುವ ಮಂಗಳಮುಖೀಯರ ಸಮೀಕ್ಷೆ ನಡೆಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 70 ಲಕ್ಷ ರೂ. ಮೀಸಲಿಡಲಾಗಿದೆ.

ಬಾಲಾಪರಾಧ ತಡೆಯಲು ಉಪಕಾರ: ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಉದ್ಯೋಗ ಪ್ರಾರಂಭಿಸಲು ಹಾಗೂ ಜೀವನೋಪಾಯ ರೂಪಿಸಿಕೊಳ್ಳಲು “ಉಪಕಾರ’ ಯೋಜನೆಯಡಿ ಮೂರು ವರ್ಷಗಳ ಅವಧಿಗೆ ಮಾಸಿಕ 5 ಸಾವಿರ ರೂ.ಆರ್ಥಿಕ ನೆರವು, ಯುವಕ, ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸಲು ಒಂದು ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.

Advertisement

ವಿಶಿಷ್ಟ ಚೇತನರಿಗೂ ಬಂಪರ್‌ಳ ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ವಿತರಿಸಲು 60 ಕೋಟಿ ರೂ.ಗಳ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. ದೃಷ್ಟಿದೋಷ ವುಳ್ಳ ವ್ಯಕ್ತಿಗಳಿಗೆ ಅನುಕೂಲವಾಗಲು ಬೆಂಗಳೂರು ಮತ್ತು ಕಲಬುರಗಿಯಲ್ಲಿ ಬ್ರೈಲ್‌ ಕಂ ಟಾಕಿಂಗ್‌ ಲೈಬ್ರರಿ ಸ್ಥಾಪಿಸಲು 30 ಲಕ್ಷ ರೂ.ಮೀಸಲಿಡಲಾಗಿದೆ.

ಮೈಸೂರಿನ ಸರ್ಕಾರಿ ಬ್ರೈಲ್‌ ಮುದ್ರಣಾಲಯಕ್ಕೆ 80 ಲಕ್ಷ ರೂ.ಗಳ ವೆಚ್ಚದಲ್ಲಿ ಆಧುನಿಕ ಮುದ್ರಣ ಯಂತ್ರ ಖರೀದಿ. ರಾಜ್ಯದ 500 ಅಂಧ ವಿದ್ಯಾರ್ಥಿ ಗಳಿಗೆ ತಲಾ 25 ಸಾವಿರ ರೂ.ಮೊತ್ತದ ಟಾಕಿಂಗ್‌ ಮೊಬೈಲ್‌, ಬ್ರೈಲ್‌ ವಾಚ್‌ ಹಾಗೂ ವಾಕಿಂಗ್‌ ಸ್ಟಿಕ್‌ಗಳನ್ನೊಳಗೊಂಡ ಕಿಟ್‌ ವಿತರಣೆಗೆ 1.25 ಕೋಟಿ ರೂ.ಮೀಸಲಿಡ ಲಾಗಿದೆ. ಅಂಧ ತಾಯಂದಿಯರಿಗೆ ನೀಡುವ ಮಾಸಿಕ 2 ಸಾವಿರ ರೂ.ಶಿಶು ಪಾ ಲನಾ ಭತ್ಯೆ ಯೋಜನೆಯನ್ನು ಮಗುವಿನ ಮೊದಲ ಎರಡು ವರ್ಷಗಳಿಂದ ಐದು ವರ್ಷದವರೆಗೆ ವಿಸ್ತರಣೆ ಮಾಡಲಾಗಿದೆ.

ಅಂಗನವಾಡಿಗೆ 138 ಕೋಟಿ: ರಾಜ್ಯದಲ್ಲಿ 2019ರಲ್ಲಿ ಸಂಭವಿಸಿದ್ದ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಉತ್ತರ ಕರ್ನಾಟಕದ ಬಹುಭಾಗ ಹಾನಿ ಯಾಗಿದ್ದು, 842 ಅಂಗನವಾಡಿ ಕಟ್ಟಡಗಳು ಸಹ ಹಾನಿ ಗೊಳಗಾಗಿದ್ದವು. ಅದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಇವುಗಳ ಪುನರ್‌ ನಿರ್ಮಾಣಕ್ಕಾಗಿ 138 ಕೋಟಿ ರೂ.ಮೀಸ ಲಿಡಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ 7 ಹೊಸ ಬಾಲಮಂದಿರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ 5.67 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.

“ಕಿತ್ತೂರು ರಾಣಿ ಚೆನ್ನಮ್ಮ’ ಕೇಂದ್ರ: ಕಟ್ಟಡ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ತಮ್ಮ 6 ವರ್ಷದೊಳಗಿನ ಮಕ್ಕಳ ಪಾಲನೆ ಮತ್ತು ಪೋಷಣೆಗೆ ತೊಂದರೆಯಾಗುತ್ತಿದ್ದು, ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ 10 ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 110 ಕಿತ್ತೂರು ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

“ಚರ್ಮ ಶಿಲ್ಪ’ಕ್ಕೆ 5 ಲಕ್ಷ ಸಬ್ಸಿಡಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಈ ಬಾರಿಯ ಬಜೆಟ್‌ನಲ್ಲಿ “ಸರ್ವೋದಯ ಮತ್ತು ಕ್ಷೇಮಾಭಿ ವೃದ್ಧಿ’ ವಲಯದಡಿ ಪರಿಶಿಷ್ಟ ಜಾತಿ, ಹಿಂದುಗಳಿದ ವರ್ಗ ಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ “ಸರ್ವೋ ದಯದ’ ಸೂತ್ರ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ “ಚರ್ಮ ಶಿಲ್ಪ’ ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆಗೆ 250 ಚರ್ಮ ಕುಶಲಕರ್ಮಿಗಳಿಗೆ ಡಾ.ಬಾಬು ಜಗಜೀವನ ರಾಮ್‌ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ 10 ಲಕ್ಷ ರೂ.ಗಳಲ್ಲಿ ಐದು ಲಕ್ಷ ರೂ.ಸಹಾಯ ಧನ ನೀಡಲಾಗುವುದು. ಇದಕ್ಕಾಗಿ ಈ ಸಾಲಿನಲ್ಲಿ 12.50 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಅಲ್ಲದೆ, ಇ-ವಾಣಿಜ್ಯ ಉತ್ಪನ್ನಗಳನ್ನು ಸರಬರಾಜು ಮಾಡುವ ಯುವಕರಿಗೆ ಬೈಕ್‌ ಕೊಳ್ಳಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾವಿರ ಯುವಕರಿಗೆ ತಲಾ 25,000 ರೂ.ಗಳಂತೆ 2.5 ಕೋಟಿ ರೂ.ಆರ್ಥಿಕ ನೆರವು ನೀಡಲು ಪ್ರಸ್ತಾಪಿಸಲಾಗಿದೆ.

ಹೈಲೆಟ್ಸ್‌ಗಳು
-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಒಟ್ಟಾರೆ ಬಜೆಟ್‌ನಲ್ಲಿ ಶೇ.31.16ರಷ್ಟು ಅನುದಾನ ಮೀಸಲು.

-ಮಂಗಳಮುಖೀಯರ ಸಮೀಕ್ಷೆಗಾಗಿ 70 ಲಕ್ಷ ರೂ.ಅನುದಾನ.

-ಎಲ್ಲ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಮಹಿಳೆಯರಿಗೆ ತಲುಪಿಸಲು “ಮಹಿಳಾ ಸುರಕ್ಷತಾ ಪೋರ್ಟಲ್‌’ ಆರಂಭ.

-ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ 20 ಲಕ್ಷ ರೂ.ವರೆಗೆ ಬಡ್ಡಿರಹಿತ ಕಿರು ಸಾಲ ಸೌಲಭ್ಯ.

-500 ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್‌ ಮೊಬೈಲ್‌, ಬ್ರೈಲ್‌ ವಾಚ್‌ ಹಾಗೂ ವಾಕಿಂಗ್‌ ಸ್ಟಿಕ್‌ಗಳನ್ನೊಳಗೊಂಡ ಕಿಟ್‌ ವಿತರಣೆಗೆ 1.25 ಕೋಟಿ ರೂ. ಮೀಸಲು.

Advertisement

Udayavani is now on Telegram. Click here to join our channel and stay updated with the latest news.

Next