Advertisement

ವಿವಿಗಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

05:56 PM Feb 17, 2021 | Nagendra Trasi |

ವಿಜಯಪುರ: ಸಾವಯವ ಕೃಷಿ ತವರು ಎನ್ನುವಂತೆ ಸಮೃದ್ಧ ಸಾವಯವ ಕೃಷಿ ಪ್ರದೇಶ ಇರುವ ಬಸವನಾಡಿಗೆ ರಾಜ್ಯದ ಮೊಟ್ಟ ಮೊದಲ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಬೇಡಿಕೆ ಜೋರಾಗುವ ಮುನ್ಸೂಚನೆ ಸಿಕ್ಕಿದೆ. ಜಿಲ್ಲೆಗೆ ಸಾವಯವ ವಿಶ್ವವಿದ್ಯಾಲಯ ಪಡೆಯುವುದಕ್ಕೆ ಜಿಲ್ಲೆಯ ಸಾವಯವ ಕೃಷಿಕರು ಹೋರಾಟ ಸಮಿತಿ ರಚಿಸಲು ಸಿದ್ಧತೆ ನಡೆಸಿದ್ದಾರೆ.

Advertisement

ರಾಜ್ಯ ಸರ್ಕಾರ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಚಿಂತನೆ ಆರಂಭಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಮಲೆನಾಡಿನ ಶಿವಮೊಗ್ಗದಲ್ಲಿ ಆರಂಭಿಸಲು ಯೋಜಿಸುತ್ತಿದೆ. ಇದನ್ನು ಅರಿತ ಜಿಲ್ಲೆಯ ಸಾವಯವ ಕೃಷಿಕರು ವಿಜಯಪುರ ಜಿಲ್ಲೆಗೆ ಸಾವಯವ ಕೃಷಿ ವಿಶ್ವವಿದ್ಯಾಲಯ ತರಲು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಹೋರಾಟ ಸಮಿತಿ ರಚಿಸಿ, ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಸಿದ್ಧತೆ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಶೇ. 75 ಕ್ಕೂ ಹೆಚ್ಚು ಪ್ರದೇಶ ರಸಗೊಬ್ಬರ ಮುಕ್ತವಾದ ಹಾಗೂ ಶೇ. 60ಕ್ಕಿಂತ ಹೆಚ್ಚು ಪ್ರದೇಶ ಸಾವಯವ ಕೃಷಿಯನ್ನು ಅವಲಂಬಿಸಿದೆ. ಜಿಲ್ಲೆಯ ಅನಕ್ಷರಸ್ತ ಹಾಗೂ ಪಾರಂಪರಿಕ ಕೃಷಿ ಮಾಡುವ ಮುಗ್ಧ ರೈತರಿಗೆ ತಾವು ಮಾಡುತ್ತಿರುವುದು ಸಾವಯವ ಕೃಷಿ ಎಂಬ ಅರಿವೂ ಇಲ್ಲದಂತೆ ತಮ್ಮ ಪಾಡಿಗೆ ತಾವು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಮುಂದಿನ ಪೀಳಿಗೆಗೆ ವಿಷಮುಕ್ತ ಭೂಮಿಯನ್ನು ಹಾಗೂ ಕಲುಷಿತ ಮುಕ್ತ ಪ್ರದೇಶವನ್ನು ಧಾರೆ ಎರೆಯುವಲ್ಲಿ ನಿರತರಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಳದ ವಿರುದ್ಧ ಕಳವಳದ ಧ್ವನಿ ಏಳುವ ಮುನ್ನವೇ ಜಿಲ್ಲೆಯಲ್ಲಿ ನೂರಾರು ರೈತರು ಸಾವಯವ ಕೃಷಿ ಜಾಗೃತಿಯಲ್ಲಿ
ತೊಡಗಿದ್ದಾರೆ. ಭವಿಷ್ಯದ ಪೀಳಿಗೆಯನ್ನೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಶೂನ್ಯ ಬಂಡವಾಳದ ಕೃಷಿಯ ಸಾವಯವಕ್ಕಾಗಿ ಸುಭಾಷ್‌ ಪಾಳೇಕರ ಅವರ ಜಾಗೃತಿ ಕಾರ್ಯಕ್ರಮ ನಡೆಸಿದ್ದಾರೆ.

ಇದಲ್ಲದೇ ಜಪಾನಿನ ಒಂದು ಹುಲ್ಲಿನ ಕ್ರಾಂತಿ ಪುರುಷ ಎಂದೇ ಕರೆಸಿಕೊಂಡಿರುವ ನೈಸರ್ಗಿಕ ಕೃಷಿ ಸಾಧಕ ಮಸುನೊಬು ಫುಕುವೋಕು ಅವರ ನೈಸರ್ಗಿಕ ಕೃಷಿ ಪದ್ಧತಿಯಲ್ಲೂ ಜಿಲ್ಲೆಯ ಹಲವು ರೈತರು ತೊಡಗಿಸಿಕೊಂಡಿದ್ದಾರೆ. ಜನರಲ್ಲಿ ಇದಲ್ಲದೇ ವಿಷಮುಕ್ತ ಆಹಾರ ಉತ್ಪಾದಿಸಿ, ಸಣ್ಣ ಸಣ್ಣ ಸಂಘಟನೆಗಳನ್ನು ಕಟ್ಟಿಕೊಂಡು ತಮ್ಮ ಪಾಡಿಗೆ ತಾವು ಸಾವಯವ ಕೃಷಿ ಜಾಗೃತಿಯಲ್ಲಿ ತೊಡಗಿದ್ದಾರೆ.

Advertisement

ಸಾವಯವವನ್ನೇ ಉಸಿರಾಗಿಸಿಕೊಂಡಿರುವ ಹಾಗೂ ಸಾವಯವ ಕೃಷಿಗಾಗಿ ಬದುಕನ್ನೇ ಮುಡಿಪಾಗಿಸಿ ಇರಿಸಿಕೊಂಡಿರುವ ವಿಜಯಪುರ ಜಿಲ್ಲೆ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸೂಕ್ತ ಹಾಗೂ ಯೋಗ್ಯ ಜಿಲ್ಲೆ. ಹೀಗಾಗಿ ಬಸವನಾಡಿನಲ್ಲೇ ರಾಜ್ಯದ ಸಾವಯವ ಕೃಷಿ ಮೊದಲ ವಿಶ್ವವಿದ್ಯಾಲಯ ವಿಜಯಪುರ ಜಿಲ್ಲೆಯಲ್ಲೇ ಸ್ಥಾಪನೆ ಆಗಬೇಕು. ಇದಕ್ಕಾಗಿ ಸರ್ಕಾರ ಮೇಲೆ ಒತ್ತಡ ಹೇರಲು ಜಿಲ್ಲೆಯ ಸರ್ವಪಕ್ಷ ಪಕ್ಷಾತೀತವಾಗಿ ಸಾವಯವ ಕೃಷಿ ವಿಶ್ವವಿದ್ಯಾಲಯ ಹೋರಾಟ ಸಮಿತಿ ಕಟ್ಟಲು ನಿರ್ಧರಿಸಿದ್ದಾರೆ.

ಇದಲ್ಲದೇ ಸದರಿ ಹೋರಾಟ ಸಮಿತಿ ಮೂಲಕ ಫೆ. 22ರಂದು ಇಂಡಿ ಪಟ್ಟಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಟ್ಟಡ ಲೋಕಾರ್ಪಣೆಗೆ ಬರುವ ಕೃಷಿ ಸಚಿವ ಬಿ.ಸಿ.
ಪಾಟೀಲ ಅವರಿಗೆ ಮೊದಲ ಹಂತದಲ್ಲಿ ಮನವಿ ಸಲ್ಲಿಸುವ ಯೋಜನೆ ರೂಪಿಸಿದ್ದಾರೆ. ಇದಾದ ಬಳಿಕ ಬೆಂಗಳೂರಿಗೆ ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸರ್ಕಾರದ ಉದ್ದೇಶಿತ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ವಿಜಯಪುರ ಜಿಲ್ಲೆ ಸೂಕ್ತ ಏಕೆ ಎಂಬುದನ್ನು ಮನವರಿಕೆ ಮಾಡಿಕೊಡಲು ಚಿಂತನೆ ನಡೆಸಿದ್ದಾರೆ. ಆ ಮೂಲಕ ಸರ್ಕಾರ ಮೇಲೆ ಒತ್ತಡ ಹೇರಿ ರಾಜ್ಯದ ಮೊಟ್ಟ ಮೊದಲ ಸಾವಯವ ಕೃಷಿ ವಿಶ್ವವಿದ್ಯಾಲಯವನ್ನು ವಿಜಯಪುರ ಜಿಲ್ಲೆಯಲ್ಲಿ ಸ್ಥಾಪಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ರಾಜ್ಯ ಸರ್ಕಾರ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಅದನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸುವ ಚಿಂತನೆಗಿಂತ ಸರ್ಕಾರದ ಉದ್ದೇಶ ಈಡೇರಿಕೆಗೆ ಪೂರಕ ಸಂಪನ್ಮೂಲ ಇರುವ ವಿಜಯಪುರ ಜಿಲ್ಲೆಯಲ್ಲೇ ಸ್ಥಾಪಿಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಹಾಗೂ ಒತ್ತಡ ಹೇರಲು ಒಂದೆರಡು ದಿನಗಳಲ್ಲಿ ಹೋರಾಟ ಸಮಿತಿ ರಚಿಸಲು ಸಭೆ ನಡೆಸುತ್ತೇವೆ.
ಎಸ್‌.ಟಿ. ಪಾಟೀಲ, ಸಾವಯವ ಕೃಷಿ ಪಂಡಿತ
ಪ್ರಶಸ್ತಿ ವಿಜೇತರು, ನಾದ ಬಿಕೆ ಗ್ರಾಮ

*ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next