ನವದೆಹಲಿ:ಮನುಷ್ಯನಿಗೆ ಗೌರವಯುತವಾಗಿ ಸಾಯುವ ಹಕ್ಕು ಇದೆ ಎಂದು ಹೇಳಿರುವ ಸುಪ್ರೀಂಕೋರ್ಟ್ ಲಿವಿಂಗ್ ವಿಲ್ ಹಾಗೂ ಇಚ್ಚಾ ಅಥವಾ ದಯಾಮರಣಕ್ಕೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಆದರೆ ವೈದ್ಯಕೀಯ ಮಂಡಳಿಯ ಮಾರ್ಗಸೂಚಿ ದೃಢಿಕರಿಸಿದ ನಂತರವಷ್ಟೇ ದಯಾಮರಣ ಕಾರ್ಯಗತವಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ಗೌರವಯುತವಾಗಿ ಸಾಯುವ ಹಕ್ಕು ಹೊಂದಿದ್ದು, ಗುಣಪಡಿಸಲಾರದ ಮಾರಣಾಂತಿಕ ಕಾಯಿಲೆ ಅಥವಾ ಲೈಫ್ ಸರ್ಪೋರ್ಟ್ ನಲ್ಲಿ ಇರುವ ವ್ಯಕ್ತಿ ಮಾರ್ಗಸೂಚಿ ಅನ್ವಯ ದಯಾಮರಣಕ್ಕೆ ಅನುಮತಿ ನೀಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸೇರಿದಂತೆ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.
ದಯಾಮರಣಕ್ಕೆ ಸಂಬಂಧಿಸಿದಂತೆ ಯಾರು ಮತ್ತು ಹೇಗೆ ಕಾರ್ಯಗತಗೊಳಿಸಬೇಕೆಂಬುದನ್ನು ವೈದ್ಯಕೀಯ ಮಂಡಳಿ ಅನುಮತಿ ನೀಡಬೇಕಾಗುತ್ತದೆ. ಈ ಇಚ್ಛಾಮರಣದ ವಿಷಯದಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಯ ಕಾನೂನು ರೂಪಿಸಬೇಕೆಂದು ಸೂಚಿಸಿದೆ.
ವಾಸಿಯಾಗದ ಕಾಯಿಲೆಯ ರೋಗಿಯೊಬ್ಬರು ತನಗೆ ಲೈಫ್ ಸಪೋರ್ಟ್ ಬೇಡ ಎಂದು ನಿರಾಕರಿಸುವ ಹಕ್ಕನ್ನು ನೀಡಬಹುದು ಎಂದು ಪೀಠ ತಿಳಿಸಿದೆ. ಒಂದು ವೇಳೆ ದಯಾಮರಣದ ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಕುಟುಂಬದ ಸದಸ್ಯರು ಅಥವಾ ಸ್ನೇಹಿತ ಹೈಕೋರ್ಟ್ ಮೆಟ್ಟಿಲೇರಬಹುದು. ಆಗ ದಯಾಮರಣದ ಅವಶ್ಯಕತೆ ಇದೆಯಾ ಎಂದು ವೈದ್ಯಕೀಯ ಮಂಡಳಿಯ ಪ್ರಮಾಣಪತ್ರದ ಮೇಲೆ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಗುರುತರ ಕಾಯಿಲೆಯಿಂದ ಬಳಲುತ್ತಿರುವವರು ಚಿಕಿತ್ಸೆ ಸ್ಥಗಿತಗೊಳಿಸುವ ಬಗ್ಗೆ ಬರೆದಿಟ್ಟ ದಾಖಲೆ (ಲಿವಿಂಗ್ ವಿಲ್) ಪರಿಗಣಿಸಬೇಕೇ,ಬೇಡವೇ ಎಂಬ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಈ ಬಗ್ಗೆ ಕಳೆದ ವರ್ಷದ ಅ.11ರಂದು ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. 2011ರಲ್ಲಿ ಅರುಣಾ ಶಾನ್‌ಭಾಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆಂಶಿಕ ದಯಾಮರಣಕ್ಕೆ ಅನುಮೋದನೆ ನೀಡಿತ್ತು.