Advertisement

ಗರ್ಭಿಣಿಯರಿಗೂ ಸಮವಸ್ತ್ರ ಕಡ್ಡಾಯ

12:26 PM Nov 18, 2018 | Team Udayavani |

ಬೆಂಗಳೂರು: ಗರ್ಭಿಣಿಯಾಗಿರುವ ಮಹಿಳಾ ಪೊಲೀಸ್‌ ಸಿಬ್ಬಂದಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಡಿಜಿಪಿ ನೀಲಮಣಿ ಎನ್‌ ರಾಜು ನಿರ್ದೇಶನದ ಪ್ರಕಾರ  ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಮಾರ್ಗಸೂಚಿ ಚರ್ಚೆಗೆ ಗ್ರಾಸವಾಗಿದೆ.

Advertisement

ಗರ್ಭಿಣಿಯಾಗಿರುವ ಸಂದರ್ಭದಲ್ಲಿಯೂ ಮಹಿಳಾ ಕಾನ್‌ಸ್ಟೆಬಲ್‌ಗ‌ಳು ಪ್ಯಾಂಟ್‌ ಧರಿಸಿ ಔಟ್‌ ಶರ್ಟ್‌ ಮಾಡಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ, ಈ ಸಂದರ್ಭದಲ್ಲಿ ಪ್ಯಾಂಟ್‌ ಧರಿಸಿ ಕರ್ತವ್ಯ ನಿರ್ವಹಿಸುವುದು ಕಷ್ಟ ಎಂಬುದು ಮಹಿಳಾ ಸಿಬ್ಬಂದಿಯ ಅನಿಸಿಕೆ.

ಈ ಹಿಂದೆ ಗರ್ಭಿಣಿಯಾಗಿರುವ ಸಿಬ್ಬಂದಿ ಸೀರೆ ಧರಿಸಿ ಕರ್ತವ್ಯ ನಿರ್ವಹಿಸಬಹುದಿತ್ತು. ಆದರೆ, ಇದೀಗ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರ ಆದೇಶದ ಅನ್ವಯ ಗರ್ಭಿಣಿ ಮಹಿಳಾ ಸಿಬ್ಬಂದಿಯೂ ಕಡ್ಡಾಯವಾಗಿ ಪ್ಯಾಂಟ್‌- ಶರ್ಟ್‌ ಸಮವಸ್ತ್ರ ಧರಿಸಲೇಬೇಕು ಎಂದು ನಗರ ಪೊಲೀಸ್‌ ಆಯುಕ್ತ ಸುನಿಲ್‌ಕುಮಾರ್‌ ಆದೇಶ ಹೊರಡಿಸಿದ್ದಾರೆ.

ನ.17ರಿಂದ ಆದೇಶ ಜಾರಿಗೆ ಬರುವಂತೆ ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಮಹಿಳಾ ಸಿಬ್ಬಂದಿ ಕಡ್ಡಾಯವಾಗಿ ಖಾಕಿ ಪ್ಯಾಂಟ್‌ ಮತ್ತು ಶರ್ಟ್‌(ಇನ್‌ ಶರ್ಟ್‌) ಧರಿಸಬೇಕು. ಒಂದು ವೇಳೆ ಮಹಿಳಾ ಸಿಬ್ಬಂದಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ವೈದ್ಯರಿಂದ ದೃಢೀಕರಣ ಪತ್ರವನ್ನು ಹಾಜರು ಪಡಿಸಿ ಸಮವಸ್ತ್ರವನ್ನು ಕಡ್ಡಾಯವಾಗಿ ಔಟ್‌ಶರ್ಟ್‌ ಮಾಡಿ ಧರಿಸಬೇಕು.

ಹೆರಿಗೆ ರಜೆಯನ್ನು ಮುಗಿಸಿಕೊಂಡು ಬಂದು ಕರ್ತವ್ಯಕ್ಕೆ ಹಾಜರಾದ ನಂತರವೂ ಕಡ್ಡಾಯವಾಗಿ ಖಾಕಿ ಪ್ಯಾಂಟ್‌ ಮತ್ತು ಶರ್ಟ್‌ ಸಮವಸ್ತ್ರ ಧರಿಸಬೇಕು ಎಂದು ಆದೇಶದಲ್ಲಿ ಉಲ್ಲೇಖೀಸಿದ್ದಾರೆ. ಈ ಆದೇಶವನ್ನು ನಿರ್ಲಕ್ಷಿಸುವ ಮಹಿಳಾ ಸಿಬ್ಬಂದಿಯನ್ನು ಠಾಣಾಧಿಕಾರಿಗಳು ಅಥವಾ ಮೇಲಾಧಿಕಾರಿಗಳು ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ತೆಗೆದುಕೊಳ್ಳಬಾರದು. ಶಿಸ್ತುಕ್ರಮ ಜರುಗಿಸಬೇಕು ಎಂದು ಪೊಲೀಸ್‌ ಆಯುಕ್ತರು ಸೂಚಿಸಿದ್ದಾರೆ.

Advertisement

ಮಹಿಳಾ ಸಿಬ್ಬಂದಿ ಅಸಮಾಧಾನ: ನಗರ ಪೊಲೀಸ್‌ ಆಯುಕ್ತರ ಆದೇಶಕ್ಕೆ ಮಹಿಳಾ ಪೊಲೀಸ್‌ ಸಿಬ್ಬಂದಿ ಅಸಮಾಧನ ವ್ಯಕ್ತಪಡಿಸಿದ್ದಾರೆ. ಗರ್ಭಿಣಿಯರು ಎಂದು ಸಾಬೀತುಪಡಿಸಲು ವೈದ್ಯರ ಧೃಡೀಕರಣ ಪತ್ರ ಸಲ್ಲಿಸಬೇಕು ಎಂದು ಹೇಳಿದರೆ ಹೇಗೆ? ಆಯುಕ್ತರ ಸೂಚನೆಯಂತೆ ಗರ್ಭಿಣಿ ಮಹಿಳೆ ಪ್ಯಾಂಟ್‌ ಧರಿಸಿ ಔಟ್‌ ಶರ್ಟ್‌ ಮಾಡಿ, ಲಾಠಿ ಹಿಡಿದು ರಸ್ತೆಯಲ್ಲಿ ನಿಲ್ಲುವುದು ಕಷ್ಟ. ಇದು ಮಹಿಳಾ ಸ್ವಾಭಿಮಾನಕ್ಕೂ ಧಕ್ಕೆಯಾಗುತ್ತದೆ.

ಕನಿಷ್ಠ 9 ತಿಂಗಳವರೆಗೆ ಸಿಬ್ಬಂದಿಗೆ ಮಾತೃತ್ವ ರಜೆ ಸಿಗುವುದಿಲ್ಲ. ಅದುವರೆಗೂ ಪ್ಯಾಂಟ್‌ ಧರಿಸಿ ಕರ್ತವ್ಯ ನಿರ್ವಹಣೆ ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಪ್ಯಾಂಟ್‌ ಧರಿಸುವುದು ಮುಜುಗರಕ್ಕಿಡಾಗುತ್ತದೆ.

ಕೇಂದ್ರ ಸರ್ಕಾರದ ಸಿಬ್ಬಂದಿಗೆ ಮಾತೃತ್ವ ರಜೆ ಜತೆಗೆ ಮಗುವಿನ ಪಾಲನೆಗಾಗಿ ಎರಡು ವರ್ಷಗಳವರೆಗೆ ರಜೆ ಕೊಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರದಲ್ಲಿ ಅಂತಹ ಯಾವದೇ ನಿಯಮ ಇಲ್ಲ. ಹೀಗಾಗಿ ನಗರ ಪೊಲೀಸ್‌ ಆಯಕ್ತರು ಹೊರಡಿಸಿರುವ ಆದೇಶದಲ್ಲಿ ಗರ್ಭಿಣಿ ಸಂದರ್ಭದಲಾದರೂ ಸಮವಸ್ತ್ರ ವಿನಾಯಿತಿ ನೀಡಬೇಕು ಮಹಿಳಾ ಸಿಬ್ಬಂದಿ ಅನಿಸಿಕೆ.

* ಮೋಹನ್ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next