ಕಾರ್ಕಳ: ಪ್ರಸ್ತುತ ಕಾಲದಲ್ಲಿ ಜ್ಞಾನವನ್ನು ವಿವಿಧ ಮೂಲಗಳಿಂದ ಪಡೆಯಬಹುದು. ನಮ್ಮ ಇಂದಿನದಲ್ಲಿ ಪುಸ್ತಕಗಳ ಓದು ಬಹಳ ಆವಶ್ಯಕ. ಓದಿನಿಂದ ಮಾತ್ರ ನಮ್ಮ ವಸುದೈವ ಕುಟುಂಬಕಂ ಪರಿಕಲ್ಪನೆ ಉಳಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ವಾಚಕ ವೃಂದ, ಕಾರ್ಕಳ ಸಾರ್ವಜನಿಕ ಗ್ರಂಥಾಲಯ ಹಾಗೂ ಕಾರ್ಕಳ ಸಾಹಿತ್ಯ ಸಂಘದ ಆಶ್ರಯದಲ್ಲಿ ಜೂ. 30ರಂದು ಗಾಂಧಿ ಮೈದಾನ ವೀರಭದ್ರ ದೇವಸ್ಥಾನದ ಸಭಾಮಂದಿರದಲ್ಲಿ ಆಯೋಜಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ| ಎಂ. ರಾಮಚಂದ್ರ ಅವರಿಂದ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಸಾಹಿತ್ಯ ಸಂಘದ ವತಿಯಿಂದ ಗ್ರಂಥಾಲಯಕ್ಕೆ ಕಂಪ್ಯೂಟರ್ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ| ಎಂ. ರಾಮಚಂದ್ರ ಅವರು ಸಾಂಕೇತಿಕವಾಗಿ ಪುಸ್ತಕ ಪ್ರದಾನ ಮಾಡಿ ಮಾತನಾಡಿ, ಜನತೆ ಪುಸ್ತಕಗಳನ್ನು ಓದಬೇಕೆನ್ನುವ ದೃಷ್ಟಿಯಿಂದ ಹಿರಿಯ ಸಾಹಿತಿ ಏರ್ಯರ ಸಲಹೆಯಂತೆ ಆಯ್ದ ಪುಸ್ತಕಗಳನ್ನು ಯೋಗ್ಯ ಸಂಸ್ಥೆ ಗ್ರಂಥಾಲಯಕ್ಕೆ ನೀಡುತ್ತಿದ್ದೇನೆ. ಈಗಾಗಲೇ 2,250 ಪುಸ್ತಕ ಗಳನ್ನು ನೀಡಿದ್ದು, ಮೂರು ಸಾವಿರದಷ್ಟು ಪುಸ್ತಕಗಳನ್ನು ಸಂತೋಷದಿಂದ ನೀಡಲಿದ್ದೇನೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಚಕರ ವೃಂದ, ಕಾರ್ಕಳ ಸಾರ್ವಜನಿಕ ಗ್ರಂಥಾಲಯ ಹಾಗೂ ಕಾರ್ಕಳ ಸಾಹಿತ್ಯ ಸಂಘದ ಆಶ್ರಯದಲ್ಲಿ ಪ್ರೊ| ಎಂ. ರಾಮಚಂದ್ರ ಅವರನ್ನು ಅಭಿನಂದಿಸಲಾಯಿತು.ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ಆರ್. ತುಕಾರಾಮ್ ನಾಯಕ್, ಜಿಲ್ಲಾ ಗ್ರಂಥಪಾಲಕಿ ನಳಿನಿ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಶುಭದಾ ರಾವ್, ಪುರಸಭೆಯ ಅಧ್ಯಕ್ಷೆ ಅನಿತಾ ಆರ್. ಅಂಚನ್, ಅರುಣ್ ಪುರಾಣಿಕ್ ಉಪಸ್ಥಿತರಿದ್ದರು.
ಸಂಚಾಲಕ ಕೆ.ಪಿ. ಶೆಣೈ ಸ್ವಾಗತಿಸಿ, ಪ್ರೊ| ಪದ್ಮನಾಭ ಗೌಡ ವಂದಿಸಿದರು. ಮುನಿರಾಜ್ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.
ಪುಸ್ತಕಗಳಿಂದ ಜ್ಞಾನ ವೃದ್ಧಿ
ಪುಸ್ತಕಗಳ ಓದು ಮನುಷ್ಯರಲ್ಲಿ ಮೌಲ್ಯಯುತ ಬದುಕು, ಹೃದಯವಂತಿಕೆ ಹುಟ್ಟಿಸುತ್ತದೆ.ನಮಗೆ ಪುಸ್ತಕಗಳಿಂದ ಜ್ಞಾನವೂ ದೊರೆಯುತ್ತದೆ. ಓದಿನ ಮೂಲಕ ಮನುಷ್ಯನ ಮೈಂಡ್‌ಸೆಟ್ ಮಾಡಿಕೊಳ್ಳುವುದು ಮುಖ್ಯ. ಇಂದಿನ ಟಿ.ವಿ. ಧಾರಾವಾಹಿಗಳು ಮನುಷ್ಯನನ್ನು ಮೂರ್ಖರನ್ನಾಗಿ ಮಾಡುತ್ತಿದೆ.
– ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ , ಹಿರಿಯ ಸಾಹಿತಿ