ಬೆಂಗಳೂರು: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಒಂದು ರೂ.ದರ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಅ. 1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಬಮೂಲ್ (ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಹಾಲು ಒಕ್ಕೂಟ) ಅಧ್ಯಕ್ಷ ಬಿ.ಜೆ.ಅಂಜನಪ್ಪ ತಿಳಿಸಿದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬೆಣ್ಣೆಯ ಬೇಡಿಕೆ ಹಾಗೂ ಬೆಲೆಯೂ ಕುಸಿದಿತ್ತು. ಹಾಗಾಗಿಯೇ ಹಾಲು ಉತ್ಪಾದಕರಿಗೆ ನೀಡುವ ದರವನ್ನು ಇಳಿಸಲಾಗಿತ್ತು. ಈಗ ಬೆಣ್ಣೆ ಬೇಡಿಕೆ ಹೆಚ್ಚಾಗಿ ಬೆಲೆಯೂ ಉತ್ತಮವಾಗಿದ್ದು, ಅದರ ಲಾಭದಲ್ಲಿ ಹಾಲು ಉತ್ಪಾದಕರಿಗೆ ಬರುವ ತಿಂಗಳಿನಿಂದ ಪ್ರತಿ ಲೀಟರ್‌ಗೆ ಒಂದು ರೂ ದರ ಏರಿಸಲಾಗಿದೆ.
ಪ್ರಸ್ತುತ ಉತ್ಪಾದಕರಿಗೆ ಪ್ರತಿ ಲೀ. 23ರೂ. ನೀಡುತ್ತಿದ್ದು, ಅ.1ರಿಂದಲೇ ಪ್ರತಿ ಲೀ.24 ರೂ. ನೀಡಲಿದ್ದೇವೆ ಎಂದು ಹೇಳಿದರು. ಪ್ರತಿ ನಿತ್ಯ ಒಕ್ಕೂಟದಲ್ಲಿ 16 ಲಕ್ಷ ಲೀ. ಹಾಲು ಶೇಖರಿಸಲಾಗುತ್ತಿದೆ. ಅದರಲ್ಲಿ ಒಂಬತ್ತು ಲಕ್ಷ ಲೀ. ದ್ರವರೂಪದ ಹಾಲು ಹಾಗೂ ಒಂದು ಲಕ್ಷ ಲೀ. ಮೊಸರು ಮಾಡಿ ಮಾರಾಟ ಮಾಡಲಾಗುತ್ತಿದೆ. ಉಳಿದ ಆರು ಲಕ್ಷ ಲೀ. ಹಾಲನ್ನು ಸಂಪೂರ್ಣ ಹಾಲಿನ ಪುಡಿ ತಯಾರಿಕೆ ಬಳಸಲಾಗುತ್ತಿದೆ.
ಒಂದು ಲೀ.ಹಾಲಿನ ಪುಡಿ ತಯಾರಿಕೆಗೆ ಹೆಚ್ಚುವರಿ 10 ರೂ. ವೆಚ್ಚ ಬರುತ್ತಿದ್ದು, ಪ್ರತಿ ದಿನ 60 ಲಕ್ಷ ರೂ. ಹೆಚ್ಚುವರಿ ಖರ್ಚಾಗುತ್ತಿದೆ. ಅಲ್ಲದೇ ಹಾಲಿನ ಪುಡಿಗೆ ಬೇಡಿಕೆಯೂ ಕಡಿಮೆ ಇದೆ. ಹೀಗಾಗಿಯೇ ಹಾಲಿನ ಪುಡಿ ತಯಾರಿಕೆಗೆ ಕಡಿವಾಣ ಹಾಕಿ ಚೀಸ್ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಿದ್ದೇವೆ. ಚೀಸ್‌ಗೆ ದೇಶವ್ಯಾಪ್ತಿ ವಾರ್ಷಿಕ ಶೇ.25ರಷ್ಟು ಬೇಡಿಕೆ ಹೆಚ್ಚುತ್ತಿದ್ದು, ಪೂನಾ ಮೂಲದ ಗೋವರ್ಧನ ಎಂಬ ಖಾಸಗಿ ಸಂಸ್ಥೆ ಹಾಗೂ ಗುಜರಾತಿನ ಅಮುಲ್ ಸಂಸ್ಥೆಗಳು ಮಾತ್ರ ಚೀಸ್ ತಯಾರಿಸುತ್ತಿದೆಎಂದು ತಿಳಿಸಿದರು.
ಕನಕಪುರದಲ್ಲಿ ಬಮೂಲ್ ವತಿಯಿಂದ 550 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನಂದಿನಿ ಹಾಲಿನ ಉತ್ಪನ್ನ ಸಂಕೀರ್ಣದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಇನ್ನು ಮೂರು ತಿಂಗಳಲ್ಲಿಯೇ ಸಂಕೀರ್ಣ ಆರಂಭವಾಗಲಿದೆ. ಇಲ್ಲಿ ಮುಖ್ಯವಾಗಿ ಪ್ರತಿನಿತ್ಯ ನಾಲ್ಕು ಲಕ್ಷ ಲೀ. ಹಾಲನ್ನು ಚೀಸ್ ತಯಾರಿಕೆಗೆ ಬಳಸಿಕೊಳ್ಳಲಾಗುವುದು ಎಂದರು.
ಸಲಹೆಗಾರರ ನೇಮಕಕ್ಕೆ ವಿರೋಧ: ಕನಕಪುರದಲ್ಲಿ ನಿರ್ಮಾಣವಾಗುತ್ತಿರುವ ಸಂಕೀರ್ಣದಲ್ಲಿ ಚೀಸ್ ಉತ್ಪಾದಿಸಲು ಯೋಜನೆ ಹಾಕಿಕೊಂಡಿರುವ ಬಮುಲ್, ಇದಕ್ಕೆ ಸಲಹೆಗಾರನನ್ನಾಗಿ ಗುಜರಾತ್ ಮೂಲದ ಅಮುಲ್ ಕಂಪನಿಯ ನಿವೃತ್ತ ಅಧಿಕಾರಿ ಕೆ.ರತ್ನಂ ಎಂಬುವವರನ್ನು ನೇಮಕ ಮಾಡಿಕೊಂಡಿದೆ. ಈ ನೇಮಕಕ್ಕೆ ಒಕ್ಕೂಟದಲ್ಲಿ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ಬಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ಅವರು, ಹಾಲಿನ ಪುಡಿ ಉತ್ಪಾದನೆಯಿಂದ ವಾರ್ಷಿಕ 200ಕೋಟಿ ರೂ. ನಷ್ಟವಾಗುತ್ತಿದೆ. ಅದನ್ನು ತಪ್ಪಿಸಿ ಲಾಭದ ಉತ್ಪನ್ನವಾದ ಚೀಸ್ ತಯಾರಿಕೆಗೆ ಮುಂದಾಗಿದ್ದೇವೆ. ಚೀಸ್ ತಯಾರಿಕೆ ಕಷ್ಟದ ಕೆಲಸವಾಗಿದ್ದು, ತಂತ್ರಜ್ಞಾನ ಅಳವಡಿಕೆಗೆ ಸಾಕಷ್ಟು ಪರಿಣಿತಿ ಹೊಂದಿದ ಸಲಹೆಗಾರನ ಅಗತ್ಯವಿತ್ತು. ಹಾಗಾಗಿಯೇ ಒಕ್ಕೂಟದ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದು ನೇಮಿಸಿಕೊಂಡಿದ್ದೇವೆ ಮುಂದಿನ ದಿನಗಳಲ್ಲಿ ಚೀಸ್‌ನಿಂದ ಲಾಭಗಳಿಸಿ ಅದನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ತಿಳಿಸಿದರು.