Advertisement
ಸಚಿವರಾಗಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಸತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೊಳಚೆ ನಿರ್ಮೂಲನಾ ಮಂಡಳಿ, ಗೃಹ ಮಂಡಳಿ ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಗೃಹ ಮಂಡಳಿ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಿರುವ ಸುಮಾರು 1178 ಪ್ಲಾಟ್‌ಗಳು ಮಾರಾಟವಾಗಿಲ್ಲ. ಅವುಗಳನ್ನು ಮಾರಾಟ ಮಾಡಲು ಈಗ ನಿಗದಿಪಡಿಸಿರುವ ಬೆಲೆಗಿಂತ ಶೇ. 2 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ವಸತಿ ರಹಿತರು ನಿರ್ಮಿಸಿಕೊಳ್ಳುತ್ತಿರುವ ಪ್ರತಿ ಮನೆಗೆ ನೀಡುತ್ತಿರುವ ಸಹಾಯಧನ ಹೆಚ್ಚಳ ಮಾಡುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಆ ರೀತಿಯ ಪ್ರಸ್ತಾವನೆ ಬಂದರೆ, ಸಹಾಯಧನ ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆಸಲಾಗುವುದು. ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 1.75 ಲಕ್ಷ ರೂ.ಸಾಮಾನ್ಯ ವರ್ಗದವರಿಗೆ 1.25 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ ಎಂದರು. 4 ಲಕ್ಷ ಮನೆ ನಿರ್ಮಾಣ ಗುರಿ: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಗ್ರಾಮೀಣ ಪ್ರದೇಶದ ವಸತಿ ರಹಿತರಿಗೆ ರಾಜೀವ್ ಗಾಂಧಿ ಆವಾಸ್ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ಯೋಜನೆ, ಬಸವ ವಸತಿ ಯೋಜನೆಗಳ ಮೂಲಕ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳ ನಿರ್ಮಾಣ ಮಾಡಲು ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಅದರಂತೆ ಪ್ರಸಕ್ತ ವರ್ಷ ನಾಲ್ಕು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.