ಬದುಕಿನ ಯಾನದಲ್ಲಿ ಹಲವರು ನಮ್ಮ ಜತೆಯಾಗುತ್ತಾರೆ. ಕೆಲವರು ಬೆಳೆಯುತ್ತಾರೆ, ಇನ್ನು ಕೆಲವರು ತಾವು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಇರುವವರನ್ನೂ ಬೆಳೆಸುತ್ತಾರೆ. ಇಂತಹವರು ಸಮಾಜದಲ್ಲಿ ಬಹಳ ವಿರಳ.
ಅಂತವರಲ್ಲಿ ನನ್ನ ಶಿಕ್ಷಕರೊಬ್ಬರೂ ಸೇರಿದ್ದಾರೆ.
ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅದು ಪ್ರಮುಖವಾದ ಘಟ್ಟ. ಆ ವರ್ಷ ನಮಗೆ ಮನಶಾÏಸ್ತ್ರಕ್ಕೆ ಹೊಸ ಶಿಕ್ಷಕ ಬರ್ತಾರೆ ಅಂತ ಗೊತ್ತಾಯ್ತು. ಅಯ್ಯೋ ಇನ್ನು ಒಂದು ವರ್ಷಕ್ಕೆ ಹೊಸ ಶಿಕ್ಷಕನ ಜತೆ ಹೊಂದಿಕೊಳ್ಬೇಕಲ್ಲ ಎಂಬ ಆತಂಕ ಎಲ್ಲರದ್ದು.
ಹೊಸ ಶಿಕ್ಷಕ ತರಗತಿಗೆ ಬಂದ ಮೊದಲ ದಿನವೇ ಎಲ್ಲರ ಮನಸ್ಸನ್ನ ಗೆದ್ದುಬಿಟ್ರಾ. ಅನಂತರದ ದಿನಗಳಲ್ಲಿ ಅವರೊಂದಿಗಿನ ಒಡನಾಟವರ್ಣನೀಯ. ಶಿಕ್ಷಕನೆಂದರೆ ಸದಾ ವಿದ್ಯಾರ್ಥಿಗಳ ಜತೆ ಅಂತರವನ್ನು ಕಾಯ್ದುಕೊಳ್ಳುತ್ತಾರೆ, ತುಂಬಾ ಶಿಸ್ತಿನಿಂದ ವರ್ತಿಸ್ತಾರೆ ಅನ್ನೋ ಕಲ್ಪನೆಯನ್ನು ಬದಿಗೊತ್ತಿ ತರಗತಿಯಲ್ಲೂ, ಹೊರಗೂ ಒಂದು ಸೌಹಾರ್ದಯುತವಾದ ವಾತಾವರಣವನ್ನು ಸೃಷ್ಟಿಸಿದರು. ಅವರ ಪ್ರತಿಯೊಂದು ತರಗತಿಯೂ ಹೊಸತನದಿಂದ ಕೂಡಿರುತ್ತಿತ್ತು. ತರಗತಿಯ ಕೊನೆಯ ನಿಮಿಷದವರೆಗೂ ಅದ್ಭುತ ವಿಚಾರಗಳನ್ನು ತಿಳಿಸುತ್ತಾ ನಮ್ಮ ಮನಸ್ಸನ್ನು ಹಿಡಿದಿಟ್ಟಿರುತ್ತಿದ್ದರು.
ನಮ್ಮನ್ನು ನಾವು ಪ್ರೀತಿಸಲು, ಸಾಧನೆ ಮಾಡಲು ಪ್ರೇರಣೆಯಾದರು. ಪ್ರತಿಯೊಬ್ಬ ವಿದ್ಯಾರ್ಥಿಯ ಮನದ ಮಾತಿಗೆ ಧ್ವನಿಯಾಗಿ, ಎಂಥಾ ಕಠಿನ ಪರಿಸ್ಥಿತಿಯಾದರೂ ಸರಿ ಅದರಿಂದ ಹೊರಬರುವಂತೆ ಮಾಡುತ್ತಿದ್ದರು. ಒಂದು ತಾಸು ಮಾತಾಡಿದ್ರೆ ಸಾಕು ಜೀವನಕ್ಕೆ ಬೇಕಾಗುವಷ್ಟು ಸ್ಫೂರ್ತಿಯನ್ನು ತುಂಬುತ್ತಿದ್ದರು. ಬೇರೆಯವರೊಂದಿಗೆ ಮಾತನಾಡಲು ಹಿಂಜರಿಕೆ ಇದ್ದ ನನಗೆ ಈಗ ನಾಲ್ಕು ಜನರ ಮುಂದೆ ನಿಂತು ಧೈರ್ಯದಿಂದ ಮಾತನಾಡಲು ಸಾಧ್ಯವಿದೆ ಎಂದರೆ ಅದಕ್ಕೆ ಅವರೇ ಕಾರಣ. ನನ್ನ ಜೀವನಕ್ಕೆ ಸ್ಫೂರ್ತಿಯಾದ ಗುರುವಿಗೆ ಥ್ಯಾಂಕ್ಸ್ ಹೇಳಬೇಕೆಂದಿನಿಸದರೂ ಸಾಧ್ಯವಾಗಿರಲಿಲ್ಲ. ಅದನ್ನೀಗ ಬರಹದ ಮೂಲಕ ಹೇಳಬೇಕೆಂದಿನಿಸುತ್ತಿದೆ. ಬದುಕಿಗೆ ಹೊಸ ದಾರಿ ತೋರಿದ ಗುರುವಿಗೆ ಮನದಾಳದ ಧನ್ಯವಾದಗಳು.
-ರಶ್ಮಿ ಯಾದವ್ ಕೆ., ಉಜಿರೆ