ಧಾರವಾಡ: ಸರ್ಕಾರಿ ಯೋಜನೆಗಳ ಪರಿಣಾಮಕಾರಿ ನೀತಿ ನಿರೂಪಣೆ ಹಾಗೂ ವ್ಯವಸ್ಥಿತ ರೀತಿ ಅನುಷ್ಠಾನಕ್ಕೆ ಖಾಸಗಿ
ಸಹಭಾಗಿತ್ವ ಮತ್ತು ಸಾಮುದಾಯಿಕ ಸಹಕಾರ ಅನಿವಾರ್ಯವಾಗಿದ್ದು, ಅರ್ಹ ಫಲಾನುಭವಿಗೆ ಯೋಜನೆಯ ಫಲ ಮುಟ್ಟುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಜಿಪಂ ಸಿಇಒ ಆರ್. ಸ್ನೇಹಲ್ ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಯೋಜಿಸಿದ ವಿವಿಧ ಶೈಕ್ಷಣಿಕ ಪ್ರಕಲ್ಪಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ರಾಜ್ಯದಲ್ಲೇ ಪ್ರಥಮ ಹಂತಕ್ಕೆ ಕೊಂಡೊಯ್ಯಲು ಯೋಜಿಸಲಾಗಿದ್ದು, ಟಾಪ್ 3 ಸ್ಥಾನಕ್ಕೆ ನಮ್ಮ ಪರಿಶ್ರಮ ಮೀಸಲಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಶಾಂತೇಶ ಎಜುಕೇಷನ್ ಸೊಸೈಟಿ, ಧಾರವಾಡ ಹಾಗೂ ಕೊಲ್ಕಾಮ್ ಆಕೃತಿ ಸಹಕಾರದಲ್ಲಿ ಮೂರು ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಸರ್ಕಾರದ ಇಲಾಖೆಗಳು ‘ಥ್ರಿ -ಪಿ’ ಮಾದರಿಯಲ್ಲಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ವೈಜ್ಞಾನಿಕ ಯೋಜನೆಗಳಿಗೆ ಬೆನ್ನೆಲುಬಾಗಿದ್ದು, ಜಿಲ್ಲಾಡಳಿತದ ನೆರವು ಈ ಸಂಸ್ಥೆಗಳಿಗೆ ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯದ ವಿಶ್ರಾಂತ ವಿಶೇಷ ಕಾರ್ಯದರ್ಶಿ ಬಿ.ವಿ. ಕುಲಕರ್ಣಿ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, 30 ಜನ ಗಂಡು ಮಕ್ಕಳಿಗೂ ವಿವೇಕ ಸ್ಕಾಲರ್ ಪ್ರೊ ಗ್ರಾಂ ಅಡಿ ಶಿಷ್ಯವೇತನ ದೊರಕಿಸಲು ಯೋಜಿಸಲಾಗುವುದು. ಉನ್ನತ ಶಿಕ್ಷಣ ಪಡೆಯುವ ಅರ್ಹತೆಗಳಿಸುವ 10 ಮಕ್ಕಳಿಗೂ ಈ ಶಿಷ್ಯವೇತನ ಮುಂದುವರಿಸಲಾಗುವುದು ಎಂದರು. ಎಸ್.ವಿ.ವೈ.ಎಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ|ಕುಮಾರ್ ಜಿ.ಎಸ್. ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಓದಿ, ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಗಮನಾರ್ಹ ಸಾಧನೆಗೈದ 30 ಮಕ್ಕಳ ಪೈಕಿ, ಹೆಬ್ಬಳ್ಳಿಯ ಸುಧಾ ಮಠಪತಿ, ರೇಣುಕಾ ದಿಂಡೂರ, ನರೇಂದ್ರದ ಯಶೋಧಾ ಪತ್ತಾರ, ಚಿಕ್ಕಮಲ್ಲಿಗವಾಡದ ಅಂಜಲಿ ನಡುವಿನಮನಿ, ಅಮ್ಮಿನಬಾವಿಯ ಬಷೀರಾ ಬಾಂಗಿ ಅವರಿಗೆ ಭಾರತ ಬುಕ್ ಡಿಪೋ ವತಿಯಿಂದ ಅಶೋಕ ಹುದ್ದಾರ ಅವರು ಉಚಿತವಾಗಿ ಕೊಡಮಾಡಿದ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ಪಠ್ಯ ಪುಸ್ತಕಗಳನ್ನು ಐವರಿಗೆ ಸಾಂಕೇತಿಕವಾಗಿ ಕೊಡಲಾಯಿತು.
ಸಂಯೋಜಕ ಜಯಂತ್ ಸ್ವಾಗತಿಸಿದರು. ಪಾಲಕರ ಪರ ದುರ್ಗಪ್ಪ ನಡುವಿನಮನಿ, ವಿದ್ಯಾರ್ಥಿನಿಯರ ಪರ ಮಂಜುಳಾ ಹೊಸಮನಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಹರ್ಷವರ್ಧನ ಶೀಲವಂತ ನಿರೂಪಿಸಿದರು. ಡಾ|ಎಸ್.ಎನ್ ಹೆಗಡೆ ವಂದಿಸಿದರು.