ಶ್ರೀನಗರ : ಕಾಶ್ಮೀರದಲ್ಲಿ ಕಲ್ಲೆಸೆಯುವವರು ಕಾಶ್ಮೀರ ರಾಷ್ಟ್ರಕ್ಕಾಗಿ ಹೋರಾಡುವವರಾಗಿದ್ದಾರೆ ಎಂದು ಹೇಳುವ ಮೂಲಕ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರದ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾರೆ. ಮಾತ್ರವಲ್ಲ, ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ ಮಧ್ಯ ಪ್ರವೇಶಿಸುವುದು ತನಗೆ ಸ್ವೀಕಾರಾರ್ಹವಾಗಿದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ಕಣಿವೆಯ ಯುವಕರಿಗೆ ಭಯೋತ್ಪಾದನೆಯ ಬದಲು ಪ್ರವಾಸೋದ್ಯಮವನ್ನು ಆಯ್ಕೆ ಮಾಡುವಂತೆ ಕೋರಿದ್ದರು.
ಇದಕ್ಕೆ ಉತ್ತರವೆಂಬಂತೆ ಫಾರೂಕ್ ಅಬ್ದುಲ್ಲ ಅವರು, “ನಮ್ಮ ಹೋರಾಟವು ಧರ್ಮದ ನೆಲೆಯಲ್ಲಿ ನಮ್ಮನ್ನು ವಿಭಜಿಸುವ ಜನರ ವಿರುದ್ಧವಾಗಿದೆ. ನಾನು ಮೋದೀಜಿ ಅವರಿಗೆ ಹೇಳಬಯಸುತ್ತೇನೆ: ಪ್ರವಾಸೋದ್ಯಮವು ಕಾಶ್ಮೀರಿಗಳ ಬದುಕೇ ಆಗಿರುವುದು ನಿಜ; ಆದರೆ ಕಲ್ಲೆಸೆಯುವವರಿಗೆ ಪ್ರವಾಸೋದ್ಯಮ ಬೇಕಾಗಿಲ್ಲ; ಅವರು ಹಸಿವಿನಿಂದ ಸಾಯಲು ಹಿಂಜರಿಯುವುದಿಲ್ಲ, ಆದರೆ ಕಾಶ್ಮೀರ ದೇಶಕ್ಕಾಗಿ ಕಲ್ಲೆಸೆಯಲು ಬಯಸುತ್ತಾರೆ; ನಾವಿದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
“ಭಾರತ – ಪಾಕಿಸ್ಥಾನಕ್ಕೆ ಕಾಶ್ಮೀರ ಪ್ರಶ್ನೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ಅಮೆರಿಕವು ಮುಂದೆ ಬಂದು ಎರಡು ದೇಶಗಳ ನಡುವಿನ ಮಧ್ಯಸ್ಥಿಕೆದಾರನಾಗಿ ನಿಂತು ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಫಾರೂಕ್ ಹೇಳಿದರು.
ಈ ನಡುವೆ ಭಾರತವು, ಕಾಶ್ಮೀರ ವಿಷಯದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸುವ ಅಗತ್ಯ ಇಲ್ಲವೆಂದು ಸ್ಪಷ್ಟವಾಗಿ ಹೇಳಿದೆ.