ಚಂಡೀಗಢ್: ಬೆಳೆ ಕಟಾವು ಮಾಡುವ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ರೈತರಿಗೆ ಕೋವಿಡ್ 19 ಲಾಕ್ ಡೌನ್ ನಿಂದ ತಾತ್ಕಾಲಿಕವಾಗಿ ನಿರ್ಬಂಧ ಸಡಿಲಿಸುವುದಾಗಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಜಿಲ್ಲಾವಾರು ನಿರ್ಬಂಧವನ್ನು ಸಡಿಲಿಕೆ ಮಾಡುವುದಾಗಿ ಹೇಳಿದರು.
ರಾಜ್ಯದಲ್ಲಿ ಈ ಬಾರಿ ಬರೋಬ್ಬರಿ 185 ಲಕ್ಷ ಟನ್ ಗಳಷ್ಟು ಗೋಧಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದು, ಬೆಳೆ ಕಟಾವಿಗೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ಸಿಎಂ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
“ನಾವೀಗ ಬೆಳೆ ಕಟಾವು ಸೀಸನ್ ನಲ್ಲಿದ್ದೇವೆ. ಏಪ್ರಿಲ್ 14ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಏಪ್ರಿಲ್ 15ರಿಂದ ಗೋಧಿ ಬೆಳೆ ಕಟಾವು ಆರಂಭವಾಗಲಿದೆ. ನಾವು ಈ ಬಾರಿ ಭರ್ಜರಿ ಗೋಧಿ ಫಸಲು ಬೆಳೆದಿದ್ದೇವೆ ಎಂದು ಅಮರೀಂದರ್ ಸಿಂಗ್ ತಿಳಿಸಿದರು.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ 21 ದಿನಗಳ ಲಾಕ್ ಡೌನ್ ಏ.14ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲದೇ ರಾಜ್ಯದಲ್ಲಿ ಏ.15ರಿಂದ ಮತ್ತೆ ಲಾಕ್ ಡೌನ್ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ಇಂದು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಾಕ್ ಡೌನ್ ನಿಂದ ಜನ ರೋಸಿ ಹೋಗಿದ್ದಾರೆ. ಯಾಕೆಂದರೆ ಇದು ದೀರ್ಘಾವಧಿಯದ್ದಾಗಿದೆ. ಆದರೆ ಲಾಕ್ ಡೌನ್ ಅನಿವಾರ್ಯವಾಗಿದೆ. ನಾವು ಕ್ವಾರಂಟೈನ್ ನಲ್ಲಿ ಇಡಬೇಕಾಗಿರುವುದು ಕರ್ತವ್ಯವಾಗಿದೆ. ವೈದ್ಯ ಸಿಬ್ಬಂದಿಗಳ ತಂಡ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದೆ. ಇದೊಂದು ಬಹುದೊಡ್ಡ ಕಾರ್ಯವಾಗಿದೆ. ಬಹುತೇಕರು ಕ್ವಾರಂಟೈನ್ ನಿಂದ ಹೊರಗುಳಿದಿದ್ದಾರೆ ಎಂದು ಹೇಳಿದರು.
ಮಾರಕ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇರಳದ ನಂತರ ಪೂರ್ಣಪ್ರಮಾಣದ ಲಾಕ್ ಡೌನ್ ಘೋಷಿಸಿದ್ದ ರಾಜ್ಯಗಳಲ್ಲಿ ಪಂಜಾಬ್ ಕೂಡಾ ಸೇರಿದೆ. ಪಂಜಾಬ್ ನಲ್ಲಿ 132 ಜನರಿಗೆ ಸೋಂಕು ದೃಢಪಟ್ಟಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.