ಶ್ರೀರಂಗಪಟ್ಟಣ: ರೈತರು ತಮ್ಮ ಜಮೀನು ಬಳಿ ಒಂದು ಗಿಡ ನೆಟ್ಟು ಬೆಳೆಸಿ ಸರ್ಕಾರದಿಂದ 100 ರೂ.ಗಳನ್ನು ಪಡೆಯಿರಿ ಜೊತೆಗೆ ಪ್ರೋತ್ಸಾಹ ಧನವನ್ನಾಗಿ ಪ್ರತಿ ಗಿಡಕ್ಕೆ 5 ರೂ. ಪಡೆಯಬಹುದು ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜು ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಪ್ರಕೃತಿ ತಾಣದಲ್ಲಿ ಅರಣ್ಯ ಇಲಾಖೆ, ಮೈಸೂರು ವಿವಿಯ ಎನ್‌ಎಸ್‌ಎಸ್ ಘಟಕ ಹಾಗೂ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಮೈಸೂರು ಘಟಕದಿಂದ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಮಾತನಾಡಿದರು.
ಕಳವಳ: ಭೂಮಿಯ ವಿಸ್ತೀರ್ಣದ ಶೇ. 33 ಅರಣ್ಯ ಎಲ್ಲೆಡೆ ಇರಬೇಕು. ಆದರೆ ಸದ್ಯ ಶೇ 10ರಷ್ಟೂ ಅರಣ್ಯ ಭೂಮಿ ಇಲ್ಲದೆ ಜೀವರಾಶಿಗಳಿಗೆ ಆಮ್ಲಜನಕ ಕೊರತೆ, ಹಾಗೂ ಮರುಭೂಮೀಕರಣ ಉಂಟಾಗುತ್ತಿದೆ. ಇದಲ್ಲದೆ ಎಲ್ಲಾ ಜೀವರಾಶಿಗಳಿಗೂ ಆಹಾರದ ಕೊರತೆಗೆ ಕಾರಣವಾಗಿದೆ. ಜೀವ ವೈವಿಧ್ಯದ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲೂ ಮರಗಳನ್ನು ಕಡಿಯಬಾರದು ಎಂಬ ನಿಯಮ ಇದೆ. ಆದರೆ ರಸ್ತೆ, ಸೇತುವೆ ಇತರ ಅಭಿವೃದ್ಧಿ ಕಾರ್ಯಗಳ ಉದ್ದೇಶಕ್ಕೆ ಮರಗಳನ್ನು ಕಡಿಯುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ತಲೆಗೊಂದು ಮರ ಬೆಳೆಸುವಂತೆ ಶಿಕ್ಷಣ ಸಂಸ್ಥೆಗಳು ತಾಕೀತು ಮಾಡಬೇಕು. ಪದ ಪ್ರಮಾಣ ಪತ್ರ ಪಡೆಯಬೇಕಾದರೆ ಮರ ಬೆಳೆಸುವುದನ್ನು ಕಡ್ಡಾಯ ಮಾಡಬೇಕು ಎಂದರು.
ಪರಿಸರ ಕಾರ್ಯ: ಮೈಸೂರು ಉಪ ಕುಲಪತಿ ಪ್ರೊ.ಜೆ. ಹೇಮಂತಕುಮಾರ್ ಮಾತನಾಡಿ, ಎನ್‌ಎಸ್‌ಎಸ್ ಘಟಕಗಳು ಉತ್ತಮ ಕೆಲಸ ಮಾಡುತ್ತಿವೆ. ಮೈಸೂರು ಘಟಕಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯುತ್ತಿವೆ. ಈ ಘಟಕಗಳು ಪರಿಸರ ಸಂಬಂಧಿತ ಕಾರ್ಯಗಳನ್ನು ಮತ್ತಷ್ಟು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು. ಕ್ರಿಯಾ ಸಮಿತಿಯ ಮುಖ್ಯಸ್ಥ ಪ್ರಸನ್ನಕುಮಾರ್ ಪ್ರಾಸಾವ್ತಿಕ ಮಾತನಾಡಿದರು. ಮೈಸೂರು ಎನ್‌ಎಸ್‌ಎಸ್ ನಿರ್ದೇಶಕ ಡಾ.ಚಂದ್ರಶೇಖರ್, ಪರಿಸರ ರಮೇಶ್, ಭಾಗ್ಯ, ಡಾ.ಕೆ.ವೈ. ಶ್ರೀನಿವಾಸ್, ಕುಂತಿಬೆಟ್ಟ ಚಂದ್ರಶೇಖರ್ ಉಪಸ್ಥಿತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ಯಾಕಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಮೈಸೂರು ವ್ಯಾಪ್ತಿಯ 8 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಕರಿಘಟ್ಟ ಅರಣ್ಯದಲ್ಲಿ ಗಿಡಗಳನ್ನು ನೆಟ್ಟು ನೀರು ಹಾಕಿದರು. ಆಲ, ಬಸರಿ, ಗೋಣಿ, ನೇರಳೆ, ಸಂಪಿಗೆ ಇತರ ಸಸಿಗಳನ್ನು ನೆಡಲಾಯಿತು.